ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಳ್ಳಲು ಕಾರಣವಾದ ಬಂಡಾಯ ಶಾಸಕರ ಬಗ್ಗೆ ಶಿವಸೇನೆ ನಾಯಕ ಸಂಜಯ್ ರಾವತ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಗುವಾಹಟಿಯಲ್ಲಿ ಬಂಡಾಯ ಶಾಸಕರನ್ನು ಸೇರಿಕೊಳ್ಳಲು ನನಗೂ ಆಫರ್ ನೀಡಿದ್ದರು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ನನಗೂ ಗುವಾಹಟಿಗೆ ತೆರಳುವ ಆಫರ್ ಸಿಕ್ಕಿತ್ತು. ಆದರೆ ನಾನು ಎಂದಿಗೂ ಬಾಳಾ ಸಾಹೇಬ್ ಠಾಕ್ರೆ ನಡೆದು ಬಂದ ಹಾದಿಯನ್ನೇ ಅನುಸರಿಸುತ್ತೇನೆ. ಹೀಗಾಗಿ ನಾನು ಅಲ್ಲಿಗೆ ಹೋಗಲಿಲ್ಲ ಎಂದು ಹೇಳಿದರು.
ನಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ . ಹೀಗಾಗಿ ನಾನು ವಿಶ್ವಾಸದಿಂದಲೇ ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳಿದ್ದೆ. 10 ಗಂಟೆಗಳ ಕಾಲ ವಿಚಾರಣೆಗೆ ಒಳಗಾಗಿ ಅಲ್ಲಿಂದ ಹಿಂದಿರುಗಿದೆ. ನಾನು ಗುವಾಹಟಿಗೂ ಹೋಗಬಹುದಿತ್ತು. ಆದರೆ ನಾನು ಬಾಳಾ ಸಾಹೇಬರ ಸೈನಿಕ. ಸತ್ಯ ನಿಮ್ಮ ಕಡೆಗೆ ಇದ್ದಾಗ ಯಾರ ಭಯವೇಕೆ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆಗೆ ಪರೋಕ್ಷ ಟಾಂಗ್ ನೀಡಿದ್ದಾರೆ.