ಕೋವಿಡ್ ಸೋಂಕಿಗೆ ಒಳಗಾಗಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್ರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್ 7 ದಿನಗಳ ಕಾಲ ವೈದ್ಯರ ನಿಗಾದಲ್ಲಿಯೇ ಇರಲಿದ್ದಾರೆ. ಆರು ಮಂದಿ ವೈದ್ಯರ ತಂಡ ಲತಾ ಮಂಗೇಶ್ಕರ್ರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ. ಲತಾ ಮಂಗೇಶ್ಕರ್ರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಗಳ ಮೂಲಗಳು ತಿಳಿಸಿವೆ.
ಲತಾ ಮಂಗೇಶ್ಕರ್ ಕೊರೊನಾ ಸೋಂಕಿಗೆ ಒಳಗಾಗಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಅವರ ಸೊಸೆ ರಚನಾ ಲತಾ ಮಂಗೇಶ್ಕರ್ರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾಗಿ ಮಾಹಿತಿ ನೀಡಿದ್ದರು. ಅಲ್ಲದೇ ಈ ಸಮಯದಲ್ಲಿ ಕುಟುಂಬದ ಖಾಸಗಿತನಕ್ಕೆ ಭಂಗ ತಾರದಂತೆ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು.
ಲತಾ ಮಂಗೇಶ್ಕರ್ರ ಆರೋಗ್ಯದ ವಿಚಾರವಾಗಿ ಮಾಹಿತಿ ನೀಡಿದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಂದಾನಿ, ಲತಾ ಮಂಗೇಶ್ಕರ್ರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ. 10 ರಿಂದ 12 ದಿನಗಳ ಕಾಲ ಅವರು ವೈದ್ಯರ ನಿಗಾದಲ್ಲಿಯೇ ಇರಲಿದ್ದಾರೆ. ಕೋವಿಡ್ ಜೊತೆಯಲ್ಲಿ ಲತಾ ಮಂಗೇಶ್ಕರ್ರಿಗೆ ನ್ಯುಮೋನಿಯಾ ಕೂಡ ಇದೆ ಎಂದು ಹೇಳಿದ್ದಾರೆ.
ದೀದಿ ಸಂಪೂರ್ಣ ಆರೋಗ್ಯವಾಗಿದ್ದಾರೆ. ದೇವರು ನಿಜಕ್ಕೂ ದಯಾಮಯಿ, ಅವರು ಹೋರಾಟಗಾರ್ತಿ ಹಾಗೂ ತಮ್ಮ ಹೋರಾಟದಲ್ಲಿ ಜಯಶಾಲಿಯಾಗಿತ್ತಾರೆ ಎಂಬುದು ನಮಗೆಲ್ಲ ತಿಳಿದಿದೆ. ಲತಾ ಮಂಗೇಶ್ಕರ್ರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿರುವ ಅವರ ಅಭಿಮಾನಿಗಳಿಗೆ ಧನ್ಯವಾದಗಳು. ಎಲ್ಲರೂ ಪ್ರಾರ್ಥಿಸಿದಾಗ ಯಾವುದೇ ರೀತಿಯ ಸಂಕಷ್ಟ ಎದುರಾಗೋದಿಲ್ಲ ಎಂದು ರಚನಾ ಶಾ ಹೇಳಿದ್ದಾರೆ.
ವೈದ್ಯರು ಕೂಡ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಪ್ರತೀಕ್ ಸಂದಾನಿ ಕೂಡ ಲತಾ ಮಂಗೇಶ್ಕರ್ ಆರೋಗ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅತ್ಯುತ್ತಮ ವೈದ್ಯರೇ ಲತಾ ಮಂಗೇಶ್ಕರ್ರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ರಚನಾ ಮಾಹಿತಿ ನೀಡಿದ್ದಾರೆ.
ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ ಎನ್ನಲಾಗಿದ್ದು ಕುಟುಂಬಸ್ಥರಿಗೆ ಲತಾ ಮಂಗೇಶ್ಕರ್ ಭೇಟಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಲತಾ ಮಂಗೇಶ್ಕರ್ ಸಹೋದರಿ ಉಷಾ ಮಂಗೇಶ್ಕರ್ ಕೂಡ ಈ ವಿಚಾರವಾಗಿ ಮಾಹಿತಿ ನೀಡಿದ್ದು ದೀದಿಗೆ ಕೋವಿಡ್ ಇರುವ ಹಿನ್ನೆಲೆಯಲ್ಲಿ ನಮಗೆ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ. ಅಲ್ಲಿ ಅತ್ಯುತ್ತಮ ವೈದ್ಯರು ಹಾಗೂ ನರ್ಸ್ಗಳು ಇದ್ದಾರೆ. ಲತಾ ಮಂಗೇಶ್ಕರ್ ಸ್ವಲ್ಪ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗಿ ಬರಬಹುದು. ಅವರ ವಯಸ್ಸಿನ ಕಾರಣಕ್ಕೆ ಹೆಚ್ಚಿನ ದಿನ ಇಟ್ಟುಕೊಳ್ಳುತ್ತೇವೆ ಎಂದು ವೈದ್ಯರು ಹೇಳಿದ್ದಾರೆ ಅಂತಾ ಮಾಹಿತಿ ನೀಡಿದರು.