ತಮ್ಮ ಮಕ್ಕಳಿಗೆ ಪೋಷಕರಾಗಿ ಕಾರ್ಯ ನಿರ್ವಹಿಸುವುದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಅದರಲ್ಲೂ ಸಿಂಗಲ್ ಪೇರೆಂಟ್ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿವೃತ್ತ ಕರ್ನಲ್ ಸಂಜಯ್ ಪಾಂಡೆ ಅವರು ತಮ್ಮ ಮಗಳಿಗೆ ತಾಯಿಯೂ ಅವರೇ ತಂದೆಯೂ ಅವರೇ ಆಗಿದ್ದಾರೆ. ತಾಯಿಯಿಲ್ಲದ ಸ್ಥಾನವನ್ನು ತಂದೆಯೇ ತುಂಬುತ್ತಿದ್ದು, ತನ್ನ ಗರ್ಭಿಣಿ ಪುತ್ರಿಯನ್ನು ನೋಡಿಕೊಂಡ ಸವಾಲಿನ ಬಗ್ಗೆ ಹಂಚಿಕೊಂಡಿದ್ದಾರೆ.
ಟ್ವಿಟರ್ ನಲ್ಲಿ ಕಥೆಯನ್ನು ಹಂಚಿಕೊಂಡ ಕರ್ನಲ್, ತಮ್ಮ ಪತ್ನಿ ಒಂದು ವರ್ಷದ ಹಿಂದೆ ನಿಧನರಾಗಿದ್ದಾಗಿ ತಿಳಿಸಿದ್ದಾರೆ. ಕರ್ನಲ್ ಅವರಿಗೆ ತನ್ನ ಮಗಳು ಗರ್ಭಿಣಿ ಎಂದು ತಿಳಿದಾಗ, ಗರ್ಭಾವಸ್ಥೆಯಲ್ಲಿ ಆಕೆಗೆ ನೀಡಬೇಕಾದ ಆರೈಕೆಯ ಬಗ್ಗೆ ಏನೊಂದೂ ತಿಳಿದಿರಲಿಲ್ಲವಂತೆ.
ಕರ್ನಲ್ ಅವರು ತಮ್ಮ ಮಗಳ ಗರ್ಭಾವಸ್ಥೆಯ ದಿನಗಳಲ್ಲಿ ತಮ್ಮನ್ನು ಅತ್ಯಂತ ನಿಷ್ಪ್ರಯೋಜಕ ವ್ಯಕ್ತಿ ಎಂದು ಬರೆದಿದ್ದಾರೆ. ಅವರಿಗೆ ಮಗುವಿನ ಆರೈಕೆಯ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಹಾಗಂತ ಎದೆಗುಂದದ ಅವರು ತಮ್ಮ ಪುತ್ರಿಗೆ ತಾಯಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಮಗಳಿಗಾಗಿ ಸಾಂಪ್ರದಾಯಿಕ ಆಹಾರ ತಯಾರಿಸಿದ್ದಾರೆ. ಅವರು ಯೂಟ್ಯೂಬ್ ವಿಡಿಯೋಗಳು, ಪುಸ್ತಕಗಳು, ಹಿರಿಯರಿಂದ ಕಲಿಯಲು ಮುಂದಾದರಂತೆ.
ಅವರು ತಮ್ಮ ಮಗಳಿಗೆ ಕನಿಷ್ಠ 30 ದಿನಗಳ ಕಾಲ ಉಳಿಯುವ ಸಾಂಪ್ರದಾಯಿಕ ಪೌಷ್ಟಿಕಾಂಶದ ಲಡ್ಡುಗಳನ್ನು ತಯಾರಿಸುವಲ್ಲಿ ಯಶಸ್ವಿಯಾದ್ರು. ಆದರೆ, ಅವರ ಮಗಳು ಯುಕೆಯಲ್ಲಿ ವಾಸಿಸುತ್ತಿದ್ದರಿಂದ ಪಾರ್ಸೆಲ್ ಮಾಡುವುದು ಸಮಸ್ಯೆಯನ್ನು ತಂದೊಡ್ಡಿತು. ಕೊನೆಗೆ ವ್ಯಾಕ್ಯೂಮ್-ಸೀಲ್ ಮಾಡಿದ ಮತ್ತು 96 ಗಂಟೆಗಳ ಕಾಲ ಲಡ್ಡೂಗಳನ್ನು ಫ್ರೀಜ್ ಮಾಡಿ, ಅವುಗಳನ್ನು ಯುಕೆಗೆ ಪಾರ್ಸೆಲ್ ಮಾಡಿದ್ದಾರೆ. ಹೀಗೆ ಎಂಟು ತಿಂಗಳ ಕಾಲ ನಿರಂತರವಾಗಿ ಕಳುಹಿಸಿದ್ದಾರೆ.
ಇನ್ನು ಪುತ್ರಿ ಮಗುವಿಗೆ ಜನ್ಮ ನೀಡಿದ ನಂತರ, ತಾಯಿಗೆ ಆಹಾರವನ್ನು ನೀಡಲು ಕರ್ನಲ್ ಮತ್ತೊಮ್ಮೆ ಸಂಶೋಧನೆ ನಡೆಸಿದ್ದಾರೆ. ಕರ್ನಲ್ ತನ್ನ ಮಗಳನ್ನು ಭೇಟಿ ಮಾಡಿ, ಅಲ್ಲಿಯೇ ಸಾಕಷ್ಟು ಪ್ರಮಾಣದ ಆಹಾರವನ್ನು ತಯಾರಿಸಿ ಉಣ ಬಡಿಸಿದ್ದಾರೆ. ಈ ಹೃದಯಸ್ಪರ್ಶಿ ಕಥೆಯನ್ನು ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.