ಗರ್ಭಿಣಿಯರು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗರ್ಭಾವಸ್ಥೆ ತುಂಬಾ ಸೂಕ್ಷ್ಮವಾದ ಸಮಯವಾಗಿರುವುದರಿಂದ, ಸಣ್ಣ ತಪ್ಪು ಕೂಡ ಗರ್ಭಪಾತಕ್ಕೆ ಕಾರಣವಾಗಬಹುದು. ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂಬುದರ ಬಗ್ಗೆ ವಿಶೇಷ ಎಚ್ಚರಿಕೆ ತೆಗೆದುಕೊಳ್ಳಬೇಕು. ಗರ್ಭಿಣಿಯರು ವಿಶೇಷವಾಗಿ ಪಪ್ಪಾಯ ಹಣ್ಣನ್ನು ತಿನ್ನಬಾರದೆಂದು ಹಿರಿಯರು ಸಲಹೆ ಕೊಡುತ್ತಾರೆ.
ಅದೇ ರೀತಿ ದ್ರಾಕ್ಷಿಯ ಸಿಪ್ಪೆಯನ್ನು ಜೀರ್ಣಿಸಿಕೊಳ್ಳಲು ಸಮಸ್ಯೆಯಾಗುವುದರಿಂದ ಅದನ್ನು ಕೂಡ ಗರ್ಭಿಣಿಯರು ಸೇವನೆ ಮಾಡದೇ ಇರುವುದು ಉತ್ತಮ. ಅನಾನಸ್ ಹಣ್ಣನ್ನು ತಿಂದರೆ ಗರ್ಭಪಾತವಾಗುತ್ತದೆ ಎಂಬ ವದಂತಿಯನ್ನೂ ನಾವೆಲ್ಲ ಕೇಳಿದ್ದೇವೆ. ಈ ಹಣ್ಣುಗಳಿಂದ ನಿಜಕ್ಕೂ ಗರ್ಭಿಣಿಯರಿಗೆ ತೊಂದರೆಯಾಗುತ್ತದೆಯೇ? ಗರ್ಭಾವಸ್ಥೆಯಲ್ಲಿ ಪಪ್ಪಾಯ ಹಣ್ಣನ್ನೇಕೆ ತಿನ್ನಬಾರದು ಎಂಬುದನ್ನೆಲ್ಲ ನೋಡೋಣ.
ಗರ್ಭಾವಸ್ಥೆಯಲ್ಲಿ ಪಪ್ಪಾಯ ತಿನ್ನಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಗೊಂದಲಗಳಿವೆ. ಮಾಗಿದ ಪಪ್ಪಾಯ ಹಣ್ಣು ಗರ್ಭಿಣಿಯರಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಹಸಿ ಪಪ್ಪಾಯ ಒಳ್ಳೆಯದಲ್ಲ. ಮಾಗಿದ ಪಪ್ಪಾಯಿಯಲ್ಲಿ ಬೀಟಾ ಕ್ಯಾರೋಟಿನ್, ಕೊಲೀನ್, ಫೈಬರ್, ಫೋಲೇಟ್, ಪೊಟ್ಯಾಸಿಯಮ್, ವಿಟಮಿನ್ ಎ, ಬಿ ಮತ್ತು ಸಿ ಇರುತ್ತದೆ.
ಹಸಿ ಪಪ್ಪಾಯಿಯಲ್ಲಿ ಲ್ಯಾಟೆಕ್ಸ್, ಪಾಪೈನ್ಅಂಶಗಳಿರುತ್ತವೆ. ಲ್ಯಾಟೆಕ್ಸ್ ಇರುವುದರಿಂದ ಹಸಿ ಪಪ್ಪಾಯಿಯನ್ನು ಗರ್ಭಿಣಿಯರು ತಿನ್ನಬಾರದು. ಇದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸಬಹುದು, ಪ್ರಸವಪೂರ್ವ ಸಮಸ್ಯೆಗೆ ಕಾರಣವಾಗಬಹುದು. ಹಸಿ ಪಪ್ಪಾಯಿಯು ಪಾಪೈನ್ ಅನ್ನು ಹೊಂದಿರುತ್ತದೆ, ಇದನ್ನು ದೇಹವು ಪ್ರೋಸ್ಟಗ್ಲಾಂಡಿನ್ ಎಂದು ತಪ್ಪಾಗಿ ಗ್ರಹಿಸಬಹುದು. ಇದು ಭ್ರೂಣವನ್ನು ಬೆಂಬಲಿಸುವ ಪ್ರಮುಖ ಪೊರೆಗಳನ್ನು ಸಹ ದುರ್ಬಲಗೊಳಿಸುತ್ತದೆ.
ಇದು ಸಾಮಾನ್ಯ ಅಲರ್ಜಿನ್ ಆಗಿದ್ದು, ಕೆಲವು ಅಪಾಯಕಾರಿ ಪ್ರತಿಕ್ರಿಯೆಯನ್ನು ಪ್ರಚೋದಿಸಬಹುದು.ಮಾಗಿದ ಪಪ್ಪಾಯ ಹಣ್ಣು ಗರ್ಭಿಣಿಯರಿಗೆ ಪೌಷ್ಟಿಕಾಂಶದ ಉತ್ತಮ ಮೂಲವಾಗಿದೆ. ಆದರೆ ಹಸಿ ಪಪ್ಪಾಯಿ ತುಂಬಾ ಅಪಾಯಕಾರಿ. ಕೆಲವರು ತಮ್ಮ ಗರ್ಭಾವಸ್ಥೆಯುದ್ದಕ್ಕೂ ಮಾಗಿದ ಪಪ್ಪಾಯಿಯನ್ನು ತಿನ್ನುತ್ತಾರೆ. ಕೆಲವರು ಹೆರಿಗೆ ಬಳಿಕ ಪಪ್ಪಾಯಿ ತಿನ್ನಲು ಪ್ರಾರಂಭಿಸುತ್ತಾರೆ. ನೀವು ಗರ್ಭಿಣಿಯಾಗಿದ್ದರೆ ಅಥವಾ ಗರ್ಭಧರಿಸುವ ಯೋಚನೆಯಲ್ಲಿದ್ದರೆ ಪಪ್ಪಾಯ ಸೇವನೆ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.