ಚಳಿಗಾಲದಲ್ಲಿ ಮಾಲಿನ್ಯ ಮತ್ತು ಹೊಗೆಯ ಅಪಾಯ ಹೆಚ್ಚಾಗುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೂ ತುತ್ತಾಗುವ ಸಾಧ್ಯತೆ ಇರುತ್ತದೆ. ವಾಹನಗಳಿಂದ ಹೊರಸೂಸುವ ಹೊಗೆಯೇ ಮಾಲಿನ್ಯಕ್ಕೆ ಪ್ರಮುಖ ಕಾರಣ. ಕಟ್ಟಡ ನಿರ್ಮಾಣದಂತಹ ಕಾಮಗಾರಿಗಳಿಂದಲೂ ಸಾಕಷ್ಟು ಧೂಳು ಹೊರಬರುತ್ತದೆ ಅದು ಗಾಳಿಯಲ್ಲಿ ಬೆರೆತು ವಾತಾವರಣ ಕಲುಷಿತವಾಗುತ್ತದೆ.
ಈ ರೀತಿಯ ಹೊಗೆ ಹಾಗೂ ಮಾಲಿನ್ಯ ಗರ್ಭಿಣಿಯರಿಗೆ ಹಾಗೂ ಶಿಶುಗಳಿಗೆ ತುಂಬಾನೇ ಅಪಾಯಕಾರಿ. ಮಾಲಿನ್ಯ ಹಾಗೂ ಹೊಗೆಯ ಬಗ್ಗೆ ವಯೋವೃದ್ಧರು ಕೂಡ ಎಚ್ಚರಿಕೆ ವಹಿಸಬೇಕು. ಅಕ್ಟೋಬರ್‌ನಿಂದ ಜನವರಿವರೆಗೂ ಮಾಲಿನ್ಯದ ಸಾಧ್ಯತೆ ಹೆಚ್ಚಾಗಿದ್ದು, ಗರ್ಭದಲ್ಲಿರುವ ಮಗುವಿನ ಮೇಲೆ ಸಹ ಪರಿಣಾಮ ಬೀರುತ್ತದೆ. ಮಾಲಿನ್ಯದಿಂದಾಗಿ ಗಾಳಿಯ ಗುಣಮಟ್ಟವು ಕಳಪೆಯಾಗುತ್ತದೆ. ಗರ್ಭಿಣಿಯರು ಈ ಹೊಗೆಯನ್ನು ಉಸಿರಾಡಿದಾಗ, ಮಾಲಿನ್ಯಕಾರಕಗಳು ಅವರ ದೇಹವನ್ನು ಪ್ರವೇಶಿಸುತ್ತವೆ. ಹೊಕ್ಕುಳ ಬಳ್ಳಿಯ ಮೂಲಕ ಹೊಟ್ಟೆಯಲ್ಲಿರುವ ಮಗುವನ್ನು ತಲುಪುತ್ತವೆ.
ಹುಟ್ಟುವ ಮೊದಲೇ ಮಗು ವಾಯುಮಾಲಿನ್ಯವನ್ನು ಎದುರಿಸಿದರೆ ತೂಕ ಕಡಿಮೆಯಾಗಬಹುದು, ಹುಟ್ಟುವುದಕ್ಕೂ ಮೊದಲೇ ಸತ್ತು ಹೋಗಬಹುದು. ಮಗುವಿಗೆ ಐಕ್ಯೂ ಕಡಿಮೆಯಾಗುವ ಸಾಧ್ಯತೆ ಕೂಡ ಇರುತ್ತದೆ. ಕಾರ್ಬನ್ ಮೊನಾಕ್ಸೈಡ್ ಮತ್ತು ಓಝೋನ್ ಅನಿಲಗಳ ಪರಿಣಾಮಗಳನ್ನು ತಪ್ಪಿಸಲು ಗರ್ಭಿಣಿಯರು ಆದಷ್ಟು ಮನೆಯೊಳಗೇ ಇರುವುದು ಉತ್ತಮ. ಅನಿವಾರ್ಯ ಸಂದರ್ಭಗಳಲ್ಲಿ ಸರಿಯಾದ ಮಾಸ್ಕ್ ಧರಿಸಿಕೊಂಡು ಹೊರಹೋಗಿ. ಮನೆಯಲ್ಲಿ ಧೂಳು ಶೇಖರಣೆಯಾಗದಂತೆ ಸ್ವಚ್ಛವಾಗಿಡಿ. ಏರ್ ಪ್ಯೂರಿಫೈಯರ್ ಕೂಡ ಬಳಸಬಹುದು. ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿ, ಎಸಿಯನ್ನು ಬಳಸಬಹುದು.