ನಾವು ಮಾರುಕಟ್ಟೆಯಿಂದ ತುಪ್ಪವನ್ನು ಖರೀದಿಸಿದಾಗ, ಎಣ್ಣೆ ಮತ್ತು ಕೊಬ್ಬನ್ನು ಹೆಚ್ಚಾಗಿ ಬೆರೆಸುವುದರಿಂದ ಅದು ಅಸಲಿಯೋ ಅಲ್ಲವೋ ಎಂಬ ಅನುಮಾನವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ತುಪ್ಪವನ್ನು ತಯಾರಿಸುವುದು ಉತ್ತಮ. ಇದು ಕಷ್ಟಕರವಾದ ಕೆಲಸವಲ್ಲ. ಇದನ್ನು ಮಾಡಲು, ಹಾಲನ್ನು ಬಿಸಿ ಮಾಡಿ ಅದರಿಂದ ಬಂದ ಕೆನೆಯನ್ನು ಒಂದು ಬಾಕ್ಸ್ ನಲ್ಲಿ ಶೇಖರಿಸಿ ಫ್ರಿಡ್ಜ್ ನಲ್ಲಿಡಿ. ಸಾಕಷ್ಟು ಪ್ರಮಾಣದ ಕೆನೆ ರೂಪುಗೊಳ್ಳುವವರೆಗೆ ಹೀಗೆ ಮಾಡಿ. ಬಾಕ್ಸ್ ನಲ್ಲಿ ಕೆನೆ ತುಂಬಿದ ನಂತರ ಅದಕ್ಕೆ ಸ್ವಲ್ಪ ಮೊಸರು ಬೆರೆಸಿ ಮಿಕ್ಸ್ ಮಾಡಿ ರಾತ್ರಿಯಿಡೀ ಹಾಗೆ ಇಡಿ.
ನಂತರ ಬೆಳಗ್ಗೆ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿದಾಗ, ಚೆನ್ನಾಗಿ ಬೆಣ್ಣೆ ಬರುತ್ತದೆ. ಆ ಬೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ. ಸ್ವಲ್ಪ ಸಮಯದ ನಂತರ, ತುಪ್ಪ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಶುದ್ಧವಾದ ಪಾತ್ರೆಯಲ್ಲಿ ಇರಿಸಿದರೆ ತುಪ್ಪ ಸಿದ್ಧ.