ಇದೇ ಮೊದಲ ಬಾರಿಗೆ ಎಂಬಂತೆ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕ ಸಂಜಯ್ ಪಾಂಡೆ ಮುಂಬೈನ ಭಯೋತ್ಪಾದಕ ನಿಗ್ರಹ ದಳದಲ್ಲಿ ಎರಡು ಸೂಪರಿಂಟೆಂಡೆಂಟ್ ಹುದ್ದೆ ಖಾಲಿ ಇರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಸಕ್ತ ಅಭ್ಯರ್ಥಿಗಳು ಇಲಾಖೆಯನ್ನು ಸಂಪರ್ಕಿಸುವಂತೆ ಸಾಮಾಜಿಕ ಮಾಧ್ಯಮದ ಮೂಲಕ ಹುದ್ದೆಗೆ ಆಹ್ವಾನಿಸಿದ್ದಾರೆ.
ಫೇಸ್ಬುಕ್ನಲ್ಲಿ ಡಿಜಿಪಿ ಪಾಂಡೆ ಎಟಿಎಸ್ ಪ್ರತಿಷ್ಠಿತವಾದ ಹುದ್ದೆಯಾಗಿದ್ದು ಇದು 25 ಪ್ರತಿಶತ ವಿಶೇಷ ಭತ್ಯೆಯನ್ನು ಒದಗಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ನೇರವಾಗಿ ಎಡಿಜಿ ಎಟಿಎಸ್ ಅಥವಾ ಎಡಿಜಿ ಎಸ್ಟಾಬ್ಲಿಷ್ಮೆಂಟ್ನ್ನು ಸಂಪರ್ಕಿಸಬಹುದು ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.
ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು, ಎಟಿಎಸ್ ಅತ್ಯಂತ ಪ್ರತಿಷ್ಟಿತ ಇಲಾಖೆಯಾಗಿದೆ. ಪ್ರತಿಯೊಬ್ಬರೂ ಅಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂದು ಹೇಳಿದರು. ಆದರೆ ಫೇಸ್ಬುಕ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ಡಿಜಿಪಿ ಯಾರ ಗೊಂದಲಗಳಿಗೂ ಅಲ್ಲಿ ಉತ್ತರ ನೀಡುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ, ಎಟಿಎಸ್ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಿದೆ.