ಸಾಮಾಜಿಕ ಮಾಧ್ಯಮಗಳಲ್ಲಿ ಕ್ಯಾಸಿನೋ ಬ್ರ್ಯಾಂಡ್ ಪ್ರಚಾರಕ್ಕಾಗಿ ತಮ್ಮ ಫೋಟೋಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಲವು ಹೇಳಿಕೆಗಳನ್ನು ಟ್ವಿಟರ್ನಲ್ಲಿ ನೀಡಿದ್ದಾರೆ. ತಮ್ಮ ಚಿತ್ರಗಳನ್ನು ಅಕ್ರಮವಾಗಿ ಬಳಸಿಕೊಂಡ ಕ್ಯಾಸಿನೋ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆಂದು ಸಚಿನ್ ತೆಂಡೂಲ್ಕರ್ ಎಚ್ಚರಿಕೆ ನೀಡಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡಿರುವ ಸಚಿನ್ ತೆಂಡೂಲ್ಕರ್ ಈಗಾಗಲೇ ಸಾಕಷ್ಟು ವಾಣಿಜ್ಯ ಬ್ರ್ಯಾಂಡ್ಗಳ ಜೊತೆಯಲ್ಲಿ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಆದರೆ ಜೂಜು, ತಂಬಾಕು ಹಾಗೂ ಮದ್ಯಪಾನದಂತಹ ಕಂಪನಿಗಳ ಜೊತೆಯಲ್ಲಿ ನಾನೆಂದಿಗೂ ಕೆಲಸ ಮಾಡಲು ಒಪ್ಪಿಕೊಂಡಿಲ್ಲ ಎಂದು ಸಚಿನ್ ಹೇಳಿದ್ದಾರೆ. ಆದರೆ ಜೂಜಾಟವನ್ನಾಡುವ ಕ್ಯಾಸಿನೋ ನನ್ನ ಫೋಟೋಗಳನ್ನು ಈ ರೀತಿಯಾಗಿ ಬಳಸಿಕೊಂಡಿರುವುದು ನೋವು ತಂದಿದೆ ಎಂದಿದ್ದಾರೆ.
ಟ್ವಿಟರ್ನಲ್ಲಿ ಈ ಸಂಬಂಧ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ದಾರಿಗೆ ಎಳೆಯುವಂತಹ ಚಿತ್ರಗಳ ಬಗ್ಗೆ ಜಾಗರೂಕರಾಗಿರಿ ಎಂಬ ಶೀರ್ಷಿಕೆಯಡಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಹಲವಾರು ಜಾಹೀರಾತುಗಳನ್ನು ತೋರಿಸಲಾಗುತ್ತಿದೆ. ಇದು ನನ್ನ ಗಮನಕ್ಕೂ ಬಂದಿದೆ. ನನ್ನ ಫೋಟೋವನ್ನು ಎಡಿಟ್ ಮಾಡಿ ಕ್ಯಾಸಿನೋ ಜಾಹೀರಾತಿಗೆ ಬಳಸಿಕೊಳ್ಳಲಾಗಿದೆ.
ನಾನು ಜೂಜು, ತಂಬಾಕು ಅಥವಾ ಮದ್ಯಪಾನವನ್ನು ಎಂದಿಗೂ ಪ್ರೋತ್ಸಾಹಿಸಿಲ್ಲ. ಆದರೆ ನನ್ನ ಫೋಟೋವನ್ನು ಬಳಸಿಕೊಂಡು ಜನರ ದಾರಿತಪ್ಪಿಸಲು ಯತ್ನಿಸುತ್ತಿರುವುದನ್ನು ಕಂಡು ನನಗೆ ನೋವಾಗಿದೆ ಎಂದು ಹೇಳಿದ್ದಾರೆ.
ನನ್ನ ಕಾನೂನು ತಂಡವು ಈ ಸಂಬಂಧ ಸಾಕಷ್ಟು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಈ ನಡುವೆ ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಮುಖ್ಯವಾಗಿದೆ ಎಂದು ನಾನು ಭಾವಿಸಿದ್ದೇನೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.