ಕೊರೊನಾ ವೈರಸ್ನ ಅತೀ ಹೆಚ್ಚು ಹರಡುವ ರೂಪಾಂತರಿಯಾದ ಓಮಿಕ್ರಾನ್ನಿಂದ ಉಂಟಾಗಿರುವ ಮೂರನೇ ಅಲೆಯ ತೀವ್ರತೆಯು ಕೊರೊನಾ ಎರಡನೆ ಅಲೆಯ ತೀವ್ರತೆಗಿಂತ ಕೊಂಚ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೊರೊನಾ ಎರಡನೆ ಅಲೆಯ ಉತ್ತುಂಗದ ಸಮಯದಲ್ಲಿ ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯು ನಾಲ್ಕು ಲಕ್ಷವನ್ನು ಮೀರುತ್ತಿದ್ದವು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ದೇಶದಲ್ಲಿ ಗುರುವಾರದಂದು 1.72 ಲಕ್ಷ ದೈನಂದಿನ ಪ್ರಕರಣಗಳು ವರದಿಯಾಗಿದೆ.
ದೇಶದಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದನ್ನು ನಾವು ಅಲೆ ಅಥವಾ ಉತ್ತುಂಗ ಎಂಬೆಲ್ಲ ಪದವನ್ನು ಬಳಸಿ ವರ್ಣಿಸುವುದಿಲ್ಲ. ಏಕೆಂದರೆ ಕೆಲವೊಂದು ಪ್ರದೇಶಗಳಲ್ಲಿ ಈಗಲೂ ಕೊರೊನಾ ಸೋಂಕಿನ ಸಂಖ್ಯೆಯು ಉತ್ತುಂಗದಲ್ಲಿಯೇ ಇದೆ ಎಂದು ಅರ್ಗವಾಲ್ ಹೇಳಿದ್ದಾರೆ.
ಜನವರಿ 23 ರಿಂದ ಫೆಬ್ರವರಿ 3 ರ ವರೆಗೆ ದೇಶದಲ್ಲಿ ದೈನಂದಿನ ಕೋವಿಡ್ ಸಂಖ್ಯೆಯಲ್ಲಿ 50 ಪ್ರತಿಶತ ಕುಸಿತ ಕಂಡಿದ್ದು ಕೊರೊನಾ ದೈನಂದಿನ ಪ್ರಕರಣಗಳ ಸಂಖ್ಯೆಯು 3,47,254 ರಿಂದ 1,72,433ರವರೆಗೆ ಕುಸಿತ ಕಂಡಿದೆ.
ಇದೇ ಸಮಯದಲ್ಲಿ ಪಾಸಿಟಿವಿಟಿ ದರ ಕೂಡ 39 ಪ್ರತಿಶತದಿಂದ 10.99 ಪ್ರತಿಶತಕ್ಕೆ ಕುಸಿತ ಕಂಡಿದೆ. ಇದು ಕೋವಿಡ್ ಹರಡುವಿಕೆ ಕಡಿಮೆಯಾದಂತೆ ಪಾಸಿಟಿವಿಟಿ ದರದಲ್ಲಿ ಕೂಡ ಇಳಿಕೆ ಕಂಡುಬರುತ್ತಿದೆ.
ಶೇಕಡಾ 10 ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವನ್ನು ಹೊಂದಿರುವ ಜಿಲ್ಲೆಗಳ ಸಂಖ್ಯೆಯು ವಾರದ ಹಿಂದೆ 400 ಕ್ಕಿಂತ ಕಡಿಮೆಯಾಗಿ ಈಗ 300 ಕ್ಕಿಂತ ಕಡಿಮೆಯಾಗಿದೆ, ಕೇರಳ ಹಾಗೂ ಮಿಝೋರಾಂಗಳಲ್ಲಿ ಈಗಲೂ ಕೂಡ ಪಾಸಿಟಿವಿಟಿ ದರದಲ್ಲಿ ಏರಿಕೆ ಕಂಡು ಬರುತ್ತಲೇ ಇದೆ.