ದೇಶದಲ್ಲಿ ಕೋಮು ಸೌಹಾರ್ದತೆಗೆ ಮತ್ತೊಂದು ಉದಾಹರಣೆಯಾಗಿ ಬಿಹಾರದ ಮುಸ್ಲಿಂ ಕುಟುಂಬವೊಂದು ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ-ವಿರಾಟ್ ರಾಮಾಯಣ ಮಂದಿರ ನಿರ್ಮಾಣಕ್ಕೆ 2.5 ಕೋಟಿ ರೂ. ಮೌಲ್ಯದ ಭೂಮಿ ದಾನ ಮಾಡಿದೆ.
ಈ ವಿಚಾರವಾಗಿ ಮಾತನಾಡಿದ ಪಾಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್ನ ಮುಖ್ಯಸ್ಥ ಆಚಾರ್ಯ ಕಿಶೋರ್ ಕುನಾಲ್, ಭೂಮಿಯನ್ನು ದಾನ ಮಾಡಿರುವ ಇಶ್ತಿಯಾಕ್ ಅಹ್ಮದ್ ಖಾನ್ ಗುವಾಹಟಿ ಮೂಲದ ಪೂರ್ವ ಚಂಪಾರಣ್ನ ಉದ್ಯಮಿ ಎಂದು ಹೇಳಿದ್ದಾರೆ.
ಇಶ್ತಿಯಾಕ್ ಅಹ್ಮದ್ ಖಾನ್ ಕೆಲ ದಿನಗಳ ಹಿಂದಷ್ಟೇ ಕೇಶರಿಯಾ ಉಪವಿಭಾಗದ ರಿಜಿಸ್ಟ್ರಾರ್ ಕಚೇರಿಯಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ತಮ್ಮ ಕುಟುಂಬಕ್ಕೆ ಸೇರಿದ ಭೂಮಿಯನ್ನು ದಾನ ನೀಡುವುದಾಗಿ ಬರೆದುಕೊಟ್ಟಿದ್ದಾರೆ ಎಂದು ಭಾರತೀಯ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿ ಕುನಾಲ್ ಹೇಳಿದರು.
ಖಾನ್ ಹಾಗೂ ಅವರ ಕುಟುಂಬ ಈ ರೀತಿ ಹಿಂದೂ ಮಂದಿರ ನಿರ್ಮಾಣಕ್ಕೆ ತಮ್ಮ ವೈಯಕ್ತಿಕ ಆಸ್ತಿ ದಾನ ನೀಡುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಮುಸ್ಲಿಂ ಬಾಂಧವರ ಸಹಾಯವಿರದೇ ಹೋಗಿದ್ದರೆ ನಮಗೆ ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಆಚಾರ್ಯ ಕಿಶೋರ್ ಕುನಾಲ್ ಹೇಳಿದರು.