ಮುಂಬಯಿ: ಸದ್ಯಕ್ಕೆ ಸಿಐಡಿಸಿಒ ಸೌಲಭ್ಯ ಆಂಶಿಕವಾಗಿ ಕೆಲಸ ಮಾಡುತ್ತಿದೆ, ಆದರೆ ಕೋವಿಡ್ 4ನೇ ಅಲೆ ಬಂದರೂ ಅದನ್ನು ಎದುರಿಸಲು ಸಿದ್ಧವಾಗಿದೆ ಎಂದು ನಿಗಮವು ಹೇಳಿಕೊಂಡಿದೆ.
ದೈನಂದಿನ ಕೋವಿಡ್ ಸೋಂಕಿನ ಸಂಖ್ಯೆ 100ನ್ನು ದಾಟಿದೊಡನೆ ಈ ಸೌಲಭ್ಯವು 24 ತಾಸು ಕಾರ್ಯನಿರ್ವಹಿಸುತ್ತದೆ.
ಸಿಐಡಿಸಿಒ ಭವನದ 60% ಭಾಗವನ್ನು ಬಳಸಿಕೊಂಡು 500 ಹಾಸಿಗೆಗಳನ್ನು ಅಳವಡಿಸಲಾಗಿದೆ. ಅಗತ್ಯವಿದ್ದಾಗ ಅದನ್ನು ಬಳಸಿಕೊಳ್ಳಲಾಗುವುದು. ರಾಧಾಸ್ವಾಮಿ ಸತ್ಸಂಗ ಹಾಲ್ ಮತ್ತು ಎಕ್ಸ್ ಪೋರ್ಟ್ ಹೌಸ್‌ಗಳನ್ನೂ ತಾತ್ಕಾಲಿಕವಾಗಿ ಹಸ್ತಾಂತರಿಸಲಾಗಿದೆ. ಆದರೆ, ಅಲ್ಲಿನ ಮೂಲಸೌಕರ್ಯಗಳನ್ನು ಬಳಸಿಕೊಂಡಿಲ್ಲ ಎಂದು ಸಹಾಯಕ ಆಯುಕ್ತ ಸಂಜಯ್ ಕಾಕಡೆ ತಿಳಿಸಿದ್ದಾರೆ.
ಆದರೆ, ಜನರ ಅಸಹಕಾರದಿಂದಾಗಿ ದೈನಂದಿನ ಪರೀಕ್ಷಾ ಪ್ರಮಾಣ 4,000ದಿಂದ 3,000ಕ್ಕಿಳಿದಿದೆ. ರಾತ್ರಿ ವೇಳೆ ಎಪಿಎಂಸಿ ಮಾರುಕಟ್ಟೆಯಲ್ಲಿ ಪರೀಕ್ಷೆಗಳನ್ನು ಮಾಡುವುದೂ ಕಡಿಮೆಯಾಗಿದೆ. ರೈಲ್ವೇ ನಿಲ್ದಾಣದಲ್ಲಿ ರೋಗಲಕ್ಷಣಗಳಿರುವ ವ್ಯಕ್ತಿ ಪತ್ತೆಯಾದರೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ.
ಪರೀಕ್ಷೆಗೆ ಹೋದರೆ ಜನ ಪ್ರಶ್ನೆ ಮಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಮಾತ್ರ ಪರೀಕ್ಷೆಗಳು ಜಾರಿಯಲ್ಲಿವೆ. ಮುನ್ಸಿಪಲ್ ಆಸ್ಪತ್ರೆಗೆ ಭೇಟಿ ನೀಡುವ ಪ್ರತಿ ರೋಗಿಯನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸದ್ಯಕ್ಕೆ ಪ್ರಕರಣಗಳ ಸಂಖ್ಯೆ ಸ್ಥಿರವಾಗಿದ್ದು, ನಾವು ತೀವ್ರ ನಿಗಾ ಇರಿಸಿದ್ದೇವೆ. ಖಾಸಗಿ ಪ್ರಯೋಗಾಲಯಗಳ ಪರೀಕ್ಷೆಗಳ ಮೇಲೂ ಕಣ್ಣಿರಿಸಿದ್ದೇವೆ ಎಂದು ಕಾಕಡೆ ಹೇಳಿದರು.
ನಮ್ಮ ನಿರೀಕ್ಷೆಯ ಪ್ರಕಾರ, 4ನೇ ಅಲೆ ಬಂದರೂ ಅದು ಸೌಮ್ಯವಾಗಿರುತ್ತದೆ. ಅದು ವೇಗವಾಗಿ ಹರಡಬಹುದು, ಹೀಗಾಗಿ, ನವಿ ಮುಂಬಯಿ ಪ್ರದೇಶದಲ್ಲಿ ನಾವು ಕಟ್ಟೆಚ್ಚರ ವಹಿಸಿದ್ದೇವೆ ಎಂದು ವೈದ್ಯಾಧಿಕಾರಿ ಡಾ. ಪ್ರಮೋದ್ ಪಾಟೀಲ್ ತಿಳಿಸಿದರು.
ಎನ್ಎಂಎಂಸಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕೋವಿಡ್ ರೋಗಿಗಳಿಗೆ ಮೀಸಲಾಗಿದ್ದ 407 ಹಾಸಿಗೆಗಳು ಖಾಲಿಯಾಗಿಯೇ ಉಳಿದಿವೆ. ಆಕ್ಸಿಜನ್ ಅಥವಾ ಐಸಿಯುದಲ್ಲೂ ಕೋವಿಡ್ ಸೋಂಕಿತರಿಲ್ಲ. ಸದ್ಯಕ್ಕೆ 20 ಸಕ್ರಿಯ ಪ್ರಕರಣಗಳಿವೆ. ನಿತ್ಯ ಸರಾಸರಿ 3 ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ವರದಿಯಾಗಿದೆ.