ಕೊರೆಯುವ ಚಳಿಯಲ್ಲಿ ಬಿಸಿಬಿಸಿಯಾಗಿ ಏನಾದರೂ ಕುಡಿಯಲು ಸಿಕ್ಕರೆ ದಿಲ್ ಖುಷ್ ಆಗಿಬಿಡುತ್ತೆ. ಬಿಸಿ ಬಿಸಿ ಪಾನೀಯಗಳು ನಮ್ಮ ದೇಹವು ತ್ವರಿತ ಶಾಖವನ್ನು ಅನುಭವಿಸುವಂತೆ ಮಾಡುತ್ತವೆ. ಅದಕ್ಕಾಗಿಯೇ ಜನರು ಚಳಿಗಾಲದಲ್ಲಿ ಬಿಸಿ ಚಹಾ, ಕಾಫಿ ಅಥವಾ ಹಾಟ್ ಚಾಕೊಲೇಟ್ ಅನ್ನು ಸೇವಿಸಲು ಇಷ್ಟಪಡುತ್ತಾರೆ. ಚಳಿಗಾಲದಲ್ಲಿ ವೈಟ್ ಹಾಟ್ ಚಾಕಲೇಟ್ ಸೇವನೆ ಅತ್ಯಂತ ಸೂಕ್ತ.
ವೈಟ್ ಚಾಕಲೇಟ್‌ನಲ್ಲಿ ಅನೇಕ ಉತ್ಕರ್ಷಣ ನಿರೋಧಕಗಳಿರುತ್ತವೆ. ಇದು ದೇಹದ ನಿರ್ವಿಶೀಕರಣದ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವೈಟ್ ಹಾಟ್ ಚಾಕಲೇಟ್ ರುಚಿಯಲ್ಲಿ ಕೂಡ ದಿ ಬೆಸ್ಟ್. ನೀವು ಇದನ್ನು ಕೇವಲ 5 ನಿಮಿಷಗಳಲ್ಲಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿ: 2 ಕಪ್ ಹಾಲು, ಮುಕ್ಕಾಲು ಕಪ್‌ನಷ್ಟು ವೈಟ್ ಚಾಕಲೇಟ್, ಒಂದೂವರೆ ಟೀಸ್ಪೂನ್ ವೆನಿಲ್ಲಾ ಎಸೆನ್ಸ್, ಅರ್ಧ ಟೀ ಸ್ಪೂನ್ ಉಪ್ಪು, ಗಾರ್ನಿಷ್ ಮಾಡಲು ಮ್ಯಾಷ್ಮೆಲ್ಲೋಗಳು.
ತಯಾರಿಸುವ ವಿಧಾನ: ಹಾಲನ್ನು ಪಾತ್ರೆಯೊಂದರಲ್ಲಿ ಹಾಕಿಕೊಂಡು, ಸಣ್ಣ ಉರಿಯಲ್ಲಿ ಬೆಚ್ಚಗಾಗಲು ಇಡಿ. ಅದಕ್ಕೆ ವೈಟ್ ಚಾಕಲೇಟ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಸ್ವಲ್ಪ ಉಪ್ಪು ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಮಿಶ್ರಣ ದಪ್ಪಗಾಗುವವರೆಗೂ ಮಿಕ್ಸ್ ಮಾಡುತ್ತಲೇ ಇರಿ. ದಪ್ಪಗಾದ ಬಳಿಕ ಉರಿಯನ್ನು ಬಂದ್ ಮಾಡಿ, ಪಾತ್ರೆಯನ್ನು ಕೆಳಕ್ಕಿಳಿಸಿ. ನಿಮ್ಮ ಬಿಸಿ ಬಿಸಿ ವೈಟ್ ಚಾಕಲೇಟ್ ಡ್ರಿಂಕ್ ಸಿದ್ಧವಾಗುತ್ತದೆ. ಅದನ್ನು ಮ್ಯಾಷ್ಮೆಲ್ಲೋಸ್‌ನಿಂದ ಗಾರ್ನಿಷ್ ಮಾಡಿಕೊಂಡು ಬಿಸಿಯಾಗಿದ್ದಾಗಲೇ ಸವಿಯಿರಿ. ಈ ಹಾಟ್ ವೈಟ್ ಚಾಕಲೇಟ್ ಡ್ರಿಂಕ್ ಕುಡಿಯುವುದರಿಂದ ತಲೆನೋವು ಸಹ ನಿವಾರಣೆಯಾಗುತ್ತದೆ.