ಅಸ್ಸಾಂನಲ್ಲಿ ಕೆಲ ದಿನಗಳ ಹಿಂದಷ್ಟೇ ನಿಜ ಜೀವನದಲ್ಲಿಯೂ ಮುನ್ನಾಭಾಯ್ ಎಂಬಿಬಿಎಸ್ ಘಟನೆಯೊಂದು ನಡೆದಿತ್ತು. ಆದರೆ ಇದೀಗ ಈ ನಿಜಜೀವನದ ಮುನ್ನಾಭಾಯ್ ಬಹುತೇಕ ಎಲ್ಲರನ್ನೂ ಮೂರ್ಖರನ್ನಾಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದೊಂದು ವಾರದಿಂದ 24 ವರ್ಷದ ಪಠಾಛಾರ್ ಕುಚ್ಚಿಯ ರಾಹುಲ್ ಕುಮಾರ್ ಮಾಧ್ಯಮಗಳಲ್ಲಿ ಸುದ್ದಿಯಲ್ಲಿದ್ದರು. ಒಂಟಿ ಮಹಿಳೆಯ ಪುತ್ರನೆಂದು ಹಾಗೂ ಟೀ ಮಾರಾಟ ಮಾಡುತ್ತಾ ಹೊಟ್ಟೆಪಾಡು ಸಾಗಿಸುತ್ತಿರುವ ಈ 24 ವರ್ಷದ ಯುವಕ ಮೊದಲ ಪ್ರಯತ್ನದಲ್ಲಿಯೇ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರತಿಷ್ಠಿತ ಏಮ್ಸ್ನಲ್ಲಿ ಸೀಟು ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಇದೊಂದು ಕಟ್ಟುಕತೆ ಎಂದು ತಿಳಿದುಬಂದಿದೆ.
ನೀಟ್ ಪರೀಕ್ಷೆಗೆ ಹಾಜರಾಗಿದ್ದ ಆಸ್ಸಾಂನ ವಿದ್ಯಾರ್ಥಿಗಳ ಗುಂಪೊಂದು ರಾಹುಲ್ ಅವರ ಹೇಳಿಕೆಗಳು ನಕಲಿ ಎಂದು ಮಾಧ್ಯಮಗಳ ಎದುರು ಸಾಬೀತುಪಡಿಸಿವೆ. ಫ್ಯಾಕ್ಟ್ ಚೆಕ್ ನಲ್ಲಿ ಈತ ಬೇರೆಯವರ ದಾಖಲೆಗಳನ್ನು ತೋರಿಸಿ ತನಗೆ ಏಮ್ಸ್ನಲ್ಲಿ ಸೀಟು ಸಿಕ್ಕಿದೆ ಎಂದು ತಪ್ಪು ಕತೆ ಹೇಳಿದ್ದ ಎಂದು ತಿಳಿದುಬಂದಿದೆ.
ರಾಹುಲ್ ತೋರಿಸಿರುವ ಪ್ರವೇಶ ಪತ್ರದಲ್ಲಿ ನೀಟ್ ಪರೀಕ್ಷೆಗೆ ಅವರ ರೋಲ್ ಸಂಖ್ಯೆ2303001114 ಎಂದು ನಮೂದಾಗಿತ್ತು. ಆದರೆ ಕ್ರಾಸ್ ವೆರಿಫಿಕೇಶನ್ ಮಾಡಿದ ವೇಳೆಯಲ್ಲಿ ಇದು ಹರಿಯಾಣದ ಕಿರಣ್ಜೀತ್ ಕೌರ್ ರೋಲ್ ಸಂಖ್ಯೆ ಎಂದು ತಿಳಿದುಬಂದಿದೆ. ಕಿರಣ್ಜೀತ್ ಕೌರ್ ನೀಟ್ ಪರೀಕ್ಷೆಯಲ್ಲಿ AIR 11656 ರ್ಯಾಂಕ್ ಪಡೆದಿದ್ದರು.
ಈ ರಾಹುಲ್ ಏಮ್ಸ್ನಲ್ಲಿ ಸೀಟು ಪಡೆದ ಸುದ್ದಿ ಎಷ್ಟರ ಮಟ್ಟಿಗೆ ವೈರಲ್ ಆಗಿತ್ತು ಅಂದರೆ ಆಸ್ಸಾಂ ಮುಖ್ಯಮಂತ್ರಿ ಹಿಮಂತಬಿಸ್ವಾ ಶರ್ಮಾ ರಾಹುಲ್ನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದರು.