ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಕೇರಳ ಮಹಿಳೆಗೆ ವಿಧಿಸಲಾಗಿದ್ದ ಮರಣದಂಡನೆ ಆದೇಶವನ್ನು ರದ್ದು ಮಾಡುವಂತೆ ಕೋರಿ ಯೆಮೆನ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯ ತಲಾಲ್ ಅಬ್ದು ಮಹದಿಯನ್ನು ಹತ್ಯೆಗೈದ ಆರೋಪದ ಅಡಿಯಲ್ಲಿ ಯೆಮೆನ್ನಲ್ಲಿ ಜೈಲುಪಾಲಾಗಿದ್ದಾರೆ.
2017 ರಲ್ಲಿ ಈ ಕೃತ್ಯ ನಡೆದಿತ್ತು. ಮರಣದಂಡನೆ ಆದೇಶದ ವಿರುದ್ಧ ನಿಮಿಷಾ ಪ್ರಿಯಾ ಕುಟುಂಬ ಮೇಲ್ಮನವಿ ಸಲ್ಲಿಸಿತ್ತು. ಯೆಮೆನ್ ರಾಜಧಾನಿ ಸನಾದಲ್ಲಿ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿದೆ.
ಮಹಿಳೆ ಎಂಬ ಕಾರಣಕ್ಕೆ ಮತ್ತು ತನ್ನ ವಯಸ್ಸಾದ ತಾಯಿ ಹಾಗೂ ಆರು ವರ್ಷದ ಮಗನನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ನಿಮಿಷಾ ಕೋರ್ಟ್ ಮುಂದೆ ಮನವಿ ಮಾಡಿದ್ದರು.
ಮೇಲ್ಮನವಿ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಸುಪ್ರೀಂ ಜ್ಯುಡಿಷಿಯಲ್ ಕೌನ್ಸಿಲ್ಗೆ ಅರ್ಜಿ ಸಲ್ಲಿಸುವುದು ನಿಮಿಷಾ ಮುಂದಿರುವ ಆಯ್ಕೆಯಾಗಿದೆ. ಆದರೆ ಇಲ್ಲೂ ಕೂಡ ನಿಮಿಷಾಗೆ ಯಾವುದೇ ವಿನಾಯಿತಿ ಸಿಗುವಂತೆ ಕಾಣುತ್ತಿಲ್ಲ.