ಸಾಂಕ್ರಾಮಿಕ ರೋಗ ಕೊರೋನಾ ಕಾಲಿಟ್ಟ ನಂತರ ಪ್ರಪಂಚದೆಲ್ಲೆಡೆ ಜನರ ಬದುಕು ಮಾಸ್ಕ್ ಮಯ ಆಗಿದೆ. ಮನೆಯಿಂದ ಹೊರ ಕಾಲಿಡಬೇಕಾದ್ರೆ ಮಾಸ್ಕ್ ಹಾಕಲೇಬೇಕು, ಇಲ್ಲದಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ.
ಕೆಲವೊಮ್ಮೆ ಅನಿವಾರ್ಯ ಕಾರಣವಿದ್ದರೆ ಕೆಲವು ಸೆಕೆಂಡುಗಳ ಕಾಲ ಮುಖಗವಸನ್ನು ತೆಗೆಯಬೇಕಾಗುತ್ತದೆ. ಇದೇ ರೀತಿ ಮಾಡಿದ ವ್ಯಕ್ತಿಯೊಬ್ಬರು ದುಬಾರಿ ದಂಡ ತೆರಬೇಕಾಗಿದೆ.
ಯುಕೆಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಯುಕೆಯ ವ್ಯಕ್ತಿಯೊಬ್ಬರು ಅಂಗಡಿಯೊಳಗೆ ಕೇವಲ 16 ಸೆಕೆಂಡುಗಳ ಕಾಲ ಮುಖಗವಸನ್ನು ತೆಗೆದಿದ್ದಕ್ಕೆ 2,000 ಪೌಂಡ್ (ರೂ. 2 ಲಕ್ಷ) ದಂಡ ತೆರಬೇಕಾಗಿ ಬಂದಿದೆ. ಕ್ರಿಸ್ಟೋಫರ್ ಒ ಟೂಲ್ ಎಂಬುವವರು ಪ್ರೆಸ್ಕಾಟ್‌ನ ಬಿ&ಎಂ ನಲ್ಲಿ ಶಾಪಿಂಗ್ ಮಾಡುವಾಗ ಮುಖಗವಸು ಧರಿಸಿದ್ದರು. ಆದರೆ, ಅವರು ಅಸ್ವಸ್ಥರಾಗಲು ಪ್ರಾರಂಭಿಸಿದ ನಂತರ ಕೆಲವು ಸೆಕೆಂಡುಗಳ ಕಾಲ ಮಾಸ್ಕ್ ತೆಗೆಯಬೇಕಾಯಿತು.
ಈ ವೇಳೆ ಅಲ್ಲಿದ್ದ ಅಧಿಕಾರಿಗಳು ಮುಖಗವಸು ಧರಿಸದಿದ್ದಕ್ಕಾಗಿ ಕ್ರಿಸ್ಟೋಫರ್ ಹೆಸರನ್ನು ನಮೂದಿಸಿದ್ದಾರೆ. ಈ ಘಟನೆ 2021ರ ಫೆಬ್ರವರಿಯಲ್ಲಿ ನಡೆದಿದೆ. ಕೆಲವು ದಿನಗಳ ನಂತರ, ಎ ಸಿ ಆರ್ ಒ ಕ್ರಿಮಿನಲ್ ರೆಕಾರ್ಡ್ಸ್ ಆಫೀಸ್‌ನಿಂದ 100 ಪೌಂಡ್ ದಂಡವನ್ನು ಪಾವತಿಸಲು ಆದೇಶಿಸಿದ ಪತ್ರವನ್ನು ಸ್ವೀಕರಿಸಿದಾಗ ಅವರಿಗೆ ಆಘಾತವಾಗಿದೆ.
ಇ-ಮೇಲ್ ಮೂಲಕ ಅಧಿಕಾರಿಗಳಿಗೆ ವಿವರಣೆಯನ್ನು ನೀಡಿದ್ದು, ಅವರು ದಂಡವನ್ನು ಪಾವತಿಸಲು ನಿರಾಕರಿಸಿದ್ದಾರೆ. ತದನಂತರ ಅವರು ಮತ್ತೊಂದು ಪತ್ರವನ್ನು ಸ್ವೀಕರಿಸಿದ್ದು, ಅಲ್ಲಿ ದಂಡವು ಪೌಂಡ್ 2,000 ಕ್ಕೆ ಏರಿದೆ. ಇದೀಗ ಕ್ರಿಸ್ಟೋಫರ್ ಕಾನೂನು ಹೋರಾಟ ನಡೆಸುತ್ತಿದ್ದಾರೆ.