ಕುಂಬಾರ, ಚಮ್ಮಾರಿಕೆ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು ಸೇರಿದಂತೆ ಅತಿ ಸಣ್ಣ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇವರಿಗೆ ಸಾಲ, ಸಹಾಯಧನ ಒದಗಿಸುವ ಹೊಸ ಯೋಜನೆಗೆ ಈಗ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಈ ವಿಶೇಷ ಯೋಜನೆ ಅಡಿ ಬ್ಯಾಂಕುಗಳಿಂದ ತಲಾ 50,000 ರೂಪಾಯಿ ಸಾಲ – ಸಹಾಯಧನ ನೀಡಲಾಗುತ್ತಿದ್ದು, ಈ ಪೈಕಿ 35,000 ರೂಪಾಯಿ ಸಾಲವಾಗಿದ್ದರೆ 15,000 ರೂಪಾಯಿ ಸಹಾಯಧನ ಸಿಗಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮೂಲಕ ಈ ಯೋಜನೆ ಜಾರಿಗೆ ಬರಲಿದೆ.
ಪ್ರಸ್ತುತ ರಾಜ್ಯದಲ್ಲಿ 35,000 ಅತಿ ಸಣ್ಣ ನೋಂದಾಯಿತ ಕುಶಲಕರ್ಮಿಗಳಿದ್ದು, ನೋಂದಾಯಿಸಿಕೊಳ್ಳದ ಕುಶಲಕರ್ಮಿಗಳಿಗೂ ಸಾಲ ಸೌಲಭ್ಯ ಒದಗಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.
ಈ ಯೋಜನೆಯಡಿ ಪ್ರಯೋಜನ ಪಡೆಯುವಂತಹ ಕುಶಲಕರ್ಮಿಗಳಿಗೆ ಕನಿಷ್ಠ 18 ವರ್ಷಗಳಾಗಿರಬೇಕು. ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಮಾತ್ರ ಸಹಾಯಧನ ನೀಡಲಾಗುತ್ತಿದ್ದು, ಒಬ್ಬರಿಗೆ ಒಂದು ಬಾರಿ ಮಾತ್ರ ಈ ಸೌಲಭ್ಯ ಸಿಗಲಿದೆ. ಇದರ ಪ್ರಯೋಜನ ಪಡೆಯಲು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕರಕುಶಲ) ಅಥವಾ ಅಭಿವೃದ್ಧಿ ಆಯುಕ್ತರ ಕಚೇರಿಯಲ್ಲಿ ನೋಂದಣಿ ಆಗಿರಬೇಕು ಅಥವಾ ಉಪನಿರ್ದೇಶಕರು ಗ್ರಾಮೀಣ ಕೈಗಾರಿಕೆ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ / ನಗರ ಸ್ಥಳೀಯ ಸಂಸ್ಥೆಯಿಂದ ದೃಢೀಕರಣಗೊಂಡಿರಬೇಕಾಗುತ್ತದೆ.