
ದೇಹದ ಯಾವುದೇ ಭಾಗದಲ್ಲಿ ಕುರ ಮೂಡಿ ಅದು ಇಡೀ ದೇಹವನ್ನು ನೋವಿನಿಂದ ಹಿಂಡಿ ಹಿಪ್ಪೆ ಮಾಡುವ ಅನುಭವ ನಿಮಗಾಗಿದೆಯೇ…? ಅದರ ಪರಿಹಾರಕ್ಕೂ ಇಲ್ಲಿದೆ ಮದ್ದು.
ಕುರ ಮೊಡವೆಯನ್ನೇ ಹೋಲುತ್ತದೆ ಅಥವಾ ಅದಕ್ಕಿಂತಲೂ ಕೊಂಚ ದೊಡ್ಡದು. ಇದರಲ್ಲೂ ಒಳಗಿನಿಂದ ಕೀವು ತುಂಬಿರುತ್ತದೆ. ಆದರೆ ಇದರ ನೋವು ಮೊಡವೆಗಿಂತ ನೂರು ಪಟ್ಟು ಹೆಚ್ಚು. ಸ್ವಚ್ಛತೆಯ ಕೊರತೆ, ಬಿಗಿಯಾದ ಒಳ ಉಡುಪಿನ ಬಳಕೆ, ಗಾಳಿಯಾಡದೆ ಇರುವುದರಿಂದ ಕುರ ಮೂಡುವುದುಂಟು.
ವಿಶೇಷವಾಗಿ ಹಿಂಭಾಗದಲ್ಲಿ ಅಂದರೆ ಪೃಷ್ಠ ಭಾಗದಲ್ಲಿ ಕುರ ಮೂಡುವುದರಿಂದ ಕೂರಲು ಆಗದೆ ಮುಜುಗರ ಉಂಟಾಗುವ ಪರಿಸ್ಥಿತಿ ಎದುರಾಗುತ್ತದೆ. ಇದರ ನಿವಾರಣೆಗೆ ಅತ್ಯುತ್ತಮ ವಿಧಾನ ಎಂದರೆ ಉಪ್ಪು ನೀರಿನ ಸ್ನಾನ. ಉಪ್ಪು ನೀರಿನಲ್ಲಿ ಬ್ಯಾಕ್ಟೀರಿಯಾಗಳು ಸಾಯುತ್ತವೆ.
ಕೀವುಗುಳ್ಳೆ ಮೂಡುವ ಹಂತದಲ್ಲಿದ್ದರೆ ಹತ್ತಿಯ ಬಟ್ಟೆಗೆ ಲಿಂಬೆ ರಸ ಮುಟ್ಟಿಸಿ ನೋವಿರುವ ಭಾಗಕ್ಕೆ ಹಚ್ಚಿ ಒಣಗಲು ಬಿಡಿ. ಇದು ನೋವು ನಿವಾರಿಸಿ, ಬ್ಯಾಕ್ಟೀರಿಯಾಗಳನ್ನು ಸಾಯಿಸುತ್ತದೆ.
ಹಲ್ಲುಜ್ಜುವ ಪೇಸ್ಟ್ ಅಥವಾ ಅಡುಗೆ ಸೋಡಾವನ್ನು ಕಲಸಿ ನೋವಿರುವ ಜಾಗಕ್ಕೆ ಹಚ್ಚಿ ಒಣಗಲು ಬಿಡಿ. ಇದರಿಂದ ಆರಂಭದ ಹಂತದಲ್ಲಿರುವ ಕುರದ ನೋವು ಕಡಿಮೆಯಾಗುತ್ತದೆ. ಇದಕ್ಕೂ ಮೀರಿ ದೊಡ್ಡ ಕುರ ಮೂಡಿದ್ದರೆ ವೈದ್ಯರ ಬಳಿ ತೆರಳುವುದು ಒಳ್ಳೆಯದು.