ಲಖಿಸರಾಯ್ ಜಿಲ್ಲಾಧಿಕಾರಿ ಶಾಲಾ ಮುಖ್ಯೋಪಾಧ್ಯಾಯರ ಉಡುಪನ್ನು ಖಂಡಿಸಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧವನ್ನು ಎದುರಿಸುತ್ತಿದ್ದಾರೆ. ಬಿಹಾರದ ಲಖಿಸರಾಯ್ ಜಿಲ್ಲೆಯ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಸಿಂಗ್ ಕೆಲಸದ ಸ್ಥಳದಲ್ಲಿ ಕುರ್ತಾ ಪೈಜಾಮ ಧರಿಸಿ ಬಂದಿದ್ದ ಶಾಲಾ ಮುಖ್ಯೋಪಾಧ್ಯಾಯ ನಿರ್ಭಯ್ ಕುಮಾರ್ ಸಿಂಗ್ ಮೇಲೆ ಕೂಗಾಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಸಂಜಯ್ ಕುಮಾರ್ ಶಾಲೆಗೆ ಬರುವಾಗ ಮುಖ್ಯೋಪಾಧ್ಯಾಯರು ಧರಿಸಿ ಬಂದಿದ್ದ ಉಡುಪನ್ನು ಕಂಡು ಅತೀವ ಅತೃಪ್ತಿಯನ್ನು ಹೊರ ಹಾಕಿದ್ದರು. ಮುಖ್ಯೋಪಾಧ್ಯಾಯ ಶಿಕ್ಷಕನಿಗಿಂತ ಹೆಚ್ಚಾಗಿ ರಾಜಕಾರಣಿಯಂತೆ ಕಾಣುತ್ತಾರೆ ಎಂದು ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಂಜಯ್ ಕುಮಾರ್ ಸಿಂಗ್ ಶಿಕ್ಷಕ ನಿರ್ಭಯ್ ಕುಮಾರ್ ಸಿಂಗ್ಗೆ ನೀವು ಶಿಕ್ಷಕರಂತೆ ಕಾಣುತ್ತೀರಾ..? ನೀವು ಈ ಉಡುಪಿನಲ್ಲಿ ಜನಪ್ರತಿನಿಧಿಯಂತೆ ಕಾಣುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ ಜಿಲ್ಲಾಧಿಕಾರಿ ಶಾಲೆಯ ನಿರ್ವಹಣೆಯ ಬಗ್ಗೆಯೂ ಪ್ರಶ್ನೆ ಮಾಡುತ್ತಾರೆ. ಮುಖ್ಯೋಪಾಧ್ಯಾಯರ ವಿರುದ್ಧ ದೂರು ನೀಡಲು ಮೇಲಾಧಿಕಾರಿಗಳಿಗೆ ಸಂಜಯ್ ಕರೆ ಕೂಡ ಮಾಡಿದ್ದಾರೆ. ನಿರ್ಭಯ್ ಸಿಂಗ್ರನ್ನು ಅಮಾನತುಗೊಳಿಸುವಂತೆ ಹಾಗೂ ಅವರಿಗೆ ಸಂಬಳ ಕಡಿತಗೊಳಿಸುವಂತೆ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ. ಶಾಲಾ ಶಿಕ್ಷಕ ಕುರ್ತಾ ಪೈಜಾಮಾ ಧರಿಸುವುದು ಅಪರಾಧವೇ ಎಂದು ಪ್ರಶ್ನೆ ಮಾಡ್ತಿದ್ದಾರೆ.