ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಜಂಕ್ ಫುಡ್ ಸೇರಿದಂತೆ ಕೆಲವೊಂದು ಅನಾರೋಗ್ಯಕರ ಆಹಾರ ಶೈಲಿ ಇದಕ್ಕೆ ಕಾರಣ ಅನ್ನೋದು ಸುಳ್ಳಲ್ಲ. ಇದರ ಹೊರತಾಗಿಯೂ ಕೆಲವೊಂದು ಮೂಲ ಕಾರಣಗಳಿವೆ, ಅದ್ಯಾವುದು ಅನ್ನೋದನ್ನು ನೀವು ಅರ್ಥಮಾಡಿಕೊಳ್ಳಬೇಕು.
ಚೋಲೆ ಭಟೂರೆ, ಸಮೋಸಾ, ಕಚೋರಿ, ಸ್ಪ್ರಿಂಗ್ ರೋಲ್, ಆಲೂ ಟಿಕ್ಕಿ ಹೀಗೆ ಬಗೆಬಗೆಯ ಕರಿದ ತಿಂಡಿಗಳನ್ನು ನಾವು ತಿನ್ನುತ್ತೇವೆ. ರಸ್ತೆ ಪಕ್ಕದ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ತಿನ್ನೋದನ್ನು ಬಹಳ ಇಷ್ಟಪಡುತ್ತೇವೆ. ಈ ರೀತಿ ಮಾಡಿದರೆ ಚಿಕ್ಕ ವಯಸ್ಸಿನಲ್ಲೇ ಗಂಭೀರ ಕಾಯಿಲೆಗಳು ಬರಬಹುದು.
ಯಾಕಂದ್ರೆ ಹೋಟೆಲ್ ಸೇರಿದಂತೆ ಬಹುತೇಕ ಎಲ್ಲಾ ಕಡೆ ತಿನಿಸುಗಳನ್ನು ತಯಾರಿಸಲು ಕರಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸಲಾಗುತ್ತದೆ. ಈ ಬಗ್ಗೆ ಗುರುಗ್ರಾಮದ ಹೃದ್ರೋಗ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಒಮ್ಮೆ ಕರಿದ ಎಣ್ಣೆಯನ್ನು ಪುನಃ ಬಳಸಬಾರದು. ಯಾಕಂದ್ರೆ ಕೆಲವು ರಾಸಾಯನಿಕಗಳು ಅದರಲ್ಲಿ ಬರುತ್ತವೆ.
ಇದರಿಂದಾಗಿ ಹೃದಯಾಘಾತ, ಬ್ರೈನ್ ಸ್ಟ್ರೋಕ್, ಲಿವರ್ ವೈಫಲ್ಯ, ಕ್ಯಾನ್ಸರ್ ಬರಬಹುದು ಎಂದು ಎಚ್ಚರಿಸಿದ್ದಾರೆ. ಇದರಿಂದ ದೇಹದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ. ಹಾಗಾಗಿ ಕಾಯಿಸಿದ ಎಣ್ಣೆಯನ್ನು 3 ಬಾರಿಗಿಂತ ಹೆಚ್ಚು ಬಳಸದಂತೆ ವೈದ್ಯರು ಸಲಹೆ ನೀಡಿದ್ದಾರೆ. ಬೀದಿ ಬದಿಯಲ್ಲಿ ತಿನ್ನುವ ಅಭ್ಯಾಸ ಬಿಡುವಂತೆ ಸೂಚಿಸಿದ್ದಾರೆ.
ಸಂಶೋಧನೆಗಳ ಪ್ರಕಾರ, ಬಾಣಲೆಯಲ್ಲಿ ಉಳಿದ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ, ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಹೆಚ್ಚಿಸುವ ಟಾಕ್ಸಿನ್‌ಗಳು ಬಿಡುಗಡೆಯಾಗುತ್ತವೆ. ಈ ಸ್ವತಂತ್ರ ರಾಡಿಕಲ್ಸ್ ಹೆಚ್ಚಳದಿಂದಾಗಿ ದೇಹದಲ್ಲಿ ಉರಿಯೂತ ಮತ್ತು ಅನೇಕ ರೀತಿಯ ದೀರ್ಘಕಾಲದ ಕಾಯಿಲೆಗಳು ಸಂಭವಿಸುತ್ತವೆ. ಹೆಚ್ಚಿನ ತಾಪಮಾನದಲ್ಲಿ ಕಾಯಿಸಿದ ಎಣ್ಣೆಯಿಂದ ಹಾನಿಕಾರಕ ಅಂಶಗಳು ಹೊರಬರುತ್ತವೆ.
ಒಂದಕ್ಕಿಂತ ಹೆಚ್ಚು ಬಾರಿ ಎಣ್ಣೆಯನ್ನು ಬಿಸಿ ಮಾಡಿದಾಗ, ಕೊಬ್ಬಿನ ಅಣುಗಳು ಒಡೆಯುತ್ತಲೇ ಇರುತ್ತವೆ ಮತ್ತು ಹೊಗೆಯ ಜೊತೆಗೆ ವಾಸನೆ ಬರಲಾರಂಭಿಸುತ್ತದೆ. ಇದರಿಂದ ಆಹಾರವು ಕಲುಷಿತಗೊಳ್ಳುತ್ತದೆ. ಬಳಸಿದ ಎಣ್ಣೆಯಲ್ಲೇ ಮತ್ತೆ ತಿನಿಸುಗಳನ್ನು ಕರಿದಾಗ ಅದರಲ್ಲಿರುವ ಕೆಲವು ಕೊಬ್ಬುಗಳು ಟ್ರಾನ್ಸ್ ಕೊಬ್ಬುಗಳಾಗಿ ಪರಿವರ್ತನೆಗೊಳ್ಳುತ್ತವೆ. ಟ್ರಾನ್ಸ್ ಕೊಬ್ಬುಗಳು ಹಾನಿಕಾರಕ, ಹೃದಯದ ಕಾಯಿಲೆಗಳನ್ನು ಹೆಚ್ಚಿಸುತ್ತದೆ.
ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಬಳಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಈ ಎಣ್ಣೆಯ ಸೇವನೆಯಿಂದ ಕರುಳಿನ ಕ್ಯಾನ್ಸರ್, ಪಿತ್ತಕೋಶದ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್ ಮತ್ತು ಇತರ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಕಾಯಿಸಿದ ಎಣ್ಣೆಯನ್ನೇ ಮತ್ತೆ ಮತ್ತೆ ಬಳಸುವ ಮೊದಲು ಒಮ್ಮೆ ಯೋಚಿಸಿ.
ಹೆಚ್ಚಿನ ತಾಪಮಾನದಲ್ಲಿ ಕಾಯಿಸಿದಾಗಲೂ ವಿಷಕಾರಿ ಅಂಶಗಳನ್ನು ಹೊರಹಾಕದ ಸೂರ್ಯಕಾಂತಿ ಎಣ್ಣೆ, ಸೋಯಾಬೀನ್ ಎಣ್ಣೆ, ಅಕ್ಕಿ ಹೊಟ್ಟಿನ ಎಣ್ಣೆ, ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಸಾಸಿವೆ ಮತ್ತು ಕ್ಯಾನೋಲಾ ಎಣ್ಣೆಯನ್ನು ಬಳಸುವುದು ಉತ್ತಮ.