ಬರೋಬ್ಬರಿ 96 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಮುಂಬೈನ ಆರೆ ಪೊಲೀಸ್, ಆರೋಪಿಯನ್ನು ವೈಭವ್ ಥೋರ್ವೆ ಎಂದು ಗುರುತಿಸಿದ ಬಳಿಕ ಅಂಧೇರಿ ಮಹಾಕಾಳಿ ಗುಹೆಯ ಪ್ರದೇಶದಿಂದ ಬಂಧಿಸಿದ್ದಾರೆ.
ಆರೋಪಿಯು ಕಾಡಿನಲ್ಲಿ ಬಚ್ಚಿಟ್ಟಿದ್ದ ಕದ್ದ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 7ರಂದು ಈಗಲ್ ಇನ್ಫ್ರಾ ಇಂಡಿಯಾದ ಗ್ರೌಂಡ್ ಸರ್ವೇ ಯಂತ್ರ ಕಣ್ಮರೆಯಾಗಿತ್ತು. ಈ ಸಂಬಂಧ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಉಲ್ಲಾಸ್ ಖೋಲಂ ಹಾಗೂ ಸಚಿನ್ ಪಂಚನ್ ನೇತೃತ್ವದಲ್ಲಿ ಈ ಪ್ರಕರಣವನ್ನು ಭೇದಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸ್ ತಂಡವು ಆರೆಯಿಂದ ಸೀಪ್ಜ್ ಪ್ರದೇಶದ ನಡುವೆ 45 ಸಿಸಿ ಕ್ಯಾಮರಾಗಳನ್ನು ನಿರಂತರವಾಗಿ 96 ಗಂಟೆಗಳಿಗೂ ಅಧಿಕ ಕಾಲ ಶೋಧ ಮಾಡಿದೆ.
ಆರೋಪಿಯನ್ನು ನಿರಂತರ ವಿಚಾರಣೆಗೆ ಒಳಪಡಿಸಿದ ಬಳಿಕ ಆತ ಆರೆ ಅರಣ್ಯದಲ್ಲಿ ಯಂತ್ರವನ್ನು ಬಚ್ಚಿಟ್ಟಿದ್ದಾಗಿ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಸರಿ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ಈ ಯಂತ್ರದ ಮೌಲ್ಯವು ಆರೋಪಿಗೆ ತಿಳಿದಿರಲಿಲ್ಲ. ಇದನ್ನು ಮಾರಾಟ ಮಾಡಲು ಆರೋಪಿಯು ಗ್ರಾಹಕರನ್ನು ಹುಡುಕುತ್ತಿದ್ದ ಎನ್ನಲಾಗಿದೆ. ಆರೋಪಿಯ ವಿರುದ್ಧ ಪೊಲೀಸ್ ಭಾರತೀಯ ದಂಡ ಸಂಹಿತೆ 461 ಹಾಗೂ 37ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.