ಅದೃಷ್ಠ ಮತ್ತು ಪರಿಶ್ರಮವಿದ್ದರೆ ಸಾಕು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮುಂಬೈನ ಕೊಳಗೇರಿಯ ಯುವತಿ ಸರಿತಾ ಮಾಲಿ ನಿದರ್ಶನವಾಗಿದ್ದಾರೆ.
ಈಕೆ ಜೆ ಎನ್ ಯು ವಿಶ್ವವಿದ್ಯಾಲಯದ ಮೂಲಕ ಯುಎಸ್ ವಿಶ್ವವಿದ್ಯಾಲಯಕ್ಕೆ ಉನ್ನತ ವ್ಯಾಸಂಗಕ್ಕಾಗಿ ಆಯ್ಕೆಯಾಗಿದ್ದಾರೆ. ಮುಂಬೈನ ಘಾಟ್ಕೊಪರ್ ನಲ್ಲಿ ಜನಿಸಿ ಅಲ್ಲಿಯೇ ಬೆಳೆದ ಮಾಲಿ, ಸ್ಥಳೀಯ ಮುನ್ಸಿಪಲ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಬಡ ಕುಟುಂಬವಾಗಿದ್ದರಿಂದ ಆಕೆಯ ಜೀವನ ಅತ್ಯಂತ ಸವಾಲಿನಿಂದ ಕೂಡಿತ್ತು. ಆದರೂ, ತನಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂಬುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದರು.
ಗೋವಾದಲ್ಲಿ ಅತ್ಯಾಚಾರ, ಗದಗದಲ್ಲಿ ಅರೆಸ್ಟ್
ಆಕೆ ಮಾಧ್ಯಮಿಕ ವ್ಯಾಸಂಗದಿಂದ ಪದವಿ ಮುಗಿಯುವವರೆಗೆ ಪ್ರತಿದಿನ ಮುಂಬೈನ ಬೀದಿಗಳಲ್ಲಿ ಹೂವುಗಳನ್ನು ಮಾರುತ್ತಾ ತನ್ನ ತಂದೆಗೆ ನೆರವಾಗುತ್ತಿದ್ದರು. ನಂತರ ಆಕೆಗೆ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಅವಕಾಶ ಸಿಕ್ಕಿತು.
ಇದೀಗ ಮಾಲಿಗೆ ಯುಎಸ್ ನ ಕ್ಯಾಲಿಫೋರ್ನಿಯಾ ಸಾಂತಾ ಬಾರ್ಬರಾ ವಿಶ್ವವಿದ್ಯಾಲಯದಲ್ಲಿ ಹಿಂದಿ ಸಾಹಿತ್ಯದ ಬಗ್ಗೆ ಪಿ ಎಚ್ ಡಿ ಮಾಡಲು ಅವಕಾಶ ಒದಗಿಬಂದಿದೆ.
ನಾನು 12 ನೇ ತರಗತಿಗೆ ಜೆ ಎನ್ ಯುಗೆ ಬರಲು ಬಯಸಿದ್ದೆ. ನಮ್ಮ ಕುಟುಂಬ ಸದಸ್ಯರು, ಅಂಕಲ್ ಎಲ್ಲರೂ ನನ್ನನ್ನು ಜೆ ಎನ್ ಯುನಲ್ಲಿ ಓದಿಸಬೇಕೆಂದೂ ಬಯಸಿದ್ದರು. ಆದರೆ, ಜೆ ಎನ್ ಯು ಎಂದರೇನು? ಎಂಬುದರ ಬಗ್ಗೆ ನನಗೆ ಕಲ್ಪನೆಯೇ ಇರಲಿಲ್ಲ. ಆದರೂ ಅಲ್ಲಿ ಓದಬೇಕೆಂಬುದನ್ನು ಮನಸಿನಲ್ಲಿಟ್ಟು ಓದಿದೆ ಮತ್ತು ಪದವಿ ಪ್ರವೇಶ ಪರೀಕ್ಷೆಯನ್ನು ಬರೆದ ನನಗೆ ಇಲ್ಲಿ ಸೀಟು ಲಭಿಸಿತು. ಇದುವೇ ನನ್ನ ಸಾಧನೆಗೆ ಒಂದು ದೊಡ್ಡ ತಿರುವಾಯಿತು ಎನ್ನುತ್ತಾರೆ ಮಾಲಿ.
ಇದೀಗ ಸ್ನಾತಕೋತ್ತರ ಪದವಿಯನ್ನೂ ಮುಗಿಸಿರುವ ಮಾಲಿ ಯುಎಸ್ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪದವಿ ಪಡೆಯುವ ಅವಕಾಶ ಬಂದೊದಗಿದೆ.