ಆಮ್ಲೆಟ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಆದರೆ ಮೊಟ್ಟೆಯಿಂದ ಮಾಡಿದ್ದು ತಿನ್ನುವುದಿಲ್ಲ ಎನ್ನುವವರು ಒಮ್ಮೆ ಕಡಲೆಹಿಟ್ಟಿನಿಂದ ಈ ರೀತಿಯಾಗಿ ಆಮ್ಲೆಟ್ ಮಾಡಿಕೊಂಡು ಸವಿಯಿರಿ. ಸಖತ್ ರುಚಿಯಾಗಿರುತ್ತದೆ.
ಬೇಕಾಗುವ ಸಾಮಗ್ರಿಗಳು:
¼ ಕಪ್ ಕಡಲೆಹಿಟ್ಟು, 1 ಟೇಬಲ್ ಸ್ಪೂನ್-ಮೈದಾ, 1/3 ಕಪ್-ನೀರು, ¼ ಟೀ ಸ್ಪೂನ್-ಬೇಕಿಂಗ್ ಪೌಡರ್, ¼ ಟೀ ಸ್ಪೂನ್-ಉಪ್ಪು, 2 ಟೇಬಲ್ ಸ್ಪೂನ್-ಈರುಳ್ಳಿ (ಸಣ್ಣಗೆ ಹಚ್ಚಿದ್ದು), ಕೊತ್ತಂಬರಿಸೊಪ್ಪು-ಸ್ವಲ್ಪ, 1-ಹಸಿಮೆಣಸು ಸಣ್ಣಗೆ ಹಚ್ಚಿದ್ದು, 1 ಟೀ ಸ್ಪೂನ್- ಬೆಣ್ಣೆ, ¼ ಟೀ ಸ್ಪೂನ್-ಕಾಳುಮೆಣಸಿನ ಪುಡಿ.
ಮಾಡುವ ವಿಧಾನ:
ಒಂದು ದೊಡ್ಡ ಬೌಲ್ ಗೆ ಕಡಲೆಹಿಟ್ಟು, ಮೈದಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದಕ್ಕೆ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಬೇಕಿಂಗ್ ಪೌಡರ್, ಉಪ್ಪು ,ಈರುಳ್ಳಿ, ಕೊತ್ತಂಬರಿಸೊಪ್ಪು, ಹಸಿಮೆಣಸು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ದೋಸೆ ಹಿಟ್ಟಿನ ಹದಕ್ಕೆ ಇರಲಿ.
ನಂತರ ಒಂದು ಪ್ಯಾನ್ ಗೆ ಬೆಣ್ಣೆ ಹಾಕಿ ಈ ಮಿಶ್ರಣವನ್ನು ಅದಕ್ಕೆ ಸೇರಿಸಿ. ಇದರ ಮೇಲೆ ಕಾಳುಮೆಣಸಿನ ಪುಡಿ ಉದುರಿಸಿ ಸಣ್ಣ ಉರಿಯಲ್ಲಿ ಎರಡು ಕಡೆ ಬೇಯಿಸಿಕೊಳ್ಳಿ.