ಒಳಚರಂಡಿ ಚೇಂಬರ್ನಲ್ಲಿ ಬಿದ್ದಿದ್ದ ಕರುವನ್ನು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ರಕ್ಷಿಸಿದ ಘಟನೆಯು ದಾದರ್ನ ಕಬೂತರ್ಖಾನಾ ಎಂಬಲ್ಲಿ ನಿನ್ನೆ ಬೆಳಗ್ಗೆ 6:30ರ ಸುಮಾರಿಗೆ ಸಂಭವಿಸಿದೆ.
ಅಗ್ನಿಶಾಮಕದಳ, ಘನತ್ಯಾಜ್ಯ ನಿರ್ವಹಣೆ, ಒಳಚರಂಡಿ ಹಾಗೂ ವಿಪತ್ತು ನಿರ್ವಹಣಾ ವಿಭಾಗಗಳ ಘಟಕಗಳೊಂದಿಗೆ ಚೇಂಬರ್ ಒಡೆದು 5.5 ಅಡಿ ಆಳದ ಗುಂಡಿಯನ್ನು ತೋಡಲಾಗಿದೆ. ಕರುವಿಗೆ ಹಗ್ಗವನ್ನು ಕಟ್ಟಿ ಸುರಕ್ಷಿತವಾಗಿ ಮೇಲೆತ್ತಲಾಗಿದೆ. ಕರುವಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ಭವಾನಿ ಶಂಕರ್ ರಸ್ತೆಯಲ್ಲಿರುವ ರಾಮಮಂದಿರ ಮುಂಭಾಗದ ಒಳಚರಂಡಿ ಚೇಂಬರ್ನಲ್ಲಿ ಕರುವು ಬಿದ್ದಿದೆ. ಚೇಂಬರ್ನ್ನು ಸರಿಯಾಗಿ ಮಚ್ಚದೇ ತೆರದಿಟ್ಟಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಅಧಿಕಾರಿಯೊಬ್ಬರು, ನಾವು ಕರುವಿನ ಮಾಲೀಕರಾದ ಗಂಗೂ ಶಿಂಧೆಯನ್ನು ಕೇಳಿದಾಗ ಅವರು ಚೇಂಬರ್ನ ಮುಚ್ಚಳ ಸಡಿಲವಾಗಿತ್ತು. ಹೀಗಾಗಿ ಕರುವು ತನ್ನ ಕಾಲಿನಿಂದ ಮುಚ್ಚಳವನ್ನು ತಳ್ಳಿರಬಹುದು ಎಂದು ಹೇಳಿದ್ದಾರೆ. ಫುಟ್ಪಾತ್ ಕಾಮಗಾರಿ ನಡೆಯುತ್ತಿರೋದ್ರಿಂದ ಒಳಚರಂಡಿ ಚೇಂಬರ್ನ ಮುಚ್ಚಳವನ್ನು ಸ್ವಲ್ಪ ತೆರೆಯಲಾಗಿತ್ತು ಎಂದು ಹೇಳಿದ್ದಾರೆ.