ಪಾಯಸ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಾಳೆಹಣ್ಣಿನ ಪಾಯಸ ಮಾಡುವ ವಿಧಾನ ಇದೆ. ಮನೆಯಲ್ಲಿ ತಂದ ಬಾಳೆಹಣ್ಣು ಹೆಚ್ಚಾಗಿದ್ದರೆ ಅಥವಾ ಪಾಯಸ ತಿನ್ನಬೇಕು ಅನಿಸಿದಾಗಲೆಲ್ಲಾ ಇದನ್ನು ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ನೇಂದ್ರ ಬಾಳೆಹಣ್ಣು – 3, ಬೆಲ್ಲ – 1 ಕಪ್, ತೆಂಗಿನಕಾಯಿ ದಪ್ಪಗಿನ ಹಾಲು – 1 ಕಪ್, ತೆಂಗಿನಕಾಯಿ ತೆಳ್ಳಗಿನ ಹಾಲು – 2 ಕಪ್, ತುಪ್ಪ – 1 ಟೇಬಲ್ ಸ್ಪೂನ್, ಗೋಡಂಬಿ – 3 ಟೇಬಲ್ ಸ್ಪೂನ್, ದ್ರಾಕ್ಷಿ – 3 ಟೇಬಲ್ ಸ್ಪೂನ್, ಏಲಕ್ಕಿ ಪುಡಿ – 1 ಟೀ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಬಾಳೆಹಣ್ಣನ್ನು ಕತ್ತರಿಸಿಕೊಂಡು ಒಂದು ಬಾಣಲೆಗೆ ಹಾಕಿ ನಂತರ 1 ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದು ಬೆಂದ ಬಳಿಕ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಇದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ತುಪ್ಪ ಸೇರಿಸಿ ನಂತರ ಅದಕ್ಕೆ ಬಾಳೆಹಣ್ಣಿನ ಮಿಶ್ರಣ ಸೇರಿಸಿ 5 ನಿಮಿಷಗಳ ಕಾಲ ಕೈಯಾಡಿಸುತ್ತ ಇರಿ. ಆಮೇಲೆ ಬೆಲ್ಲದ ಪುಡಿ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ.
ಬೆಲ್ಲ ಕರಗಿದ ನಂತರ ತೆಳುವಾದ ತೆಂಗಿನಕಾಯಿ ಹಾಲು ಸೇರಿಸಿ 5 ನಿಮಿಷಗಳ ಕಾಲ ಬೇಯಿಸಿಕೊಂಡು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ನಂತರ ದಪ್ಪಗಿನ ತೆಂಗಿನಕಾಯಿ ಹಾಲು ಸೇರಿಸಿ ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದುಕೊಂಡು ಸೇರಿಸಿದರೆ ರುಚಿಕರವಾದ ಬಾಳೆಹಣ್ಣಿನ ಪಾಯಸ ಸವಿಯಲು ಸಿದ್ಧ.