ಚಳಿಗಾಲದಲ್ಲಿ ಹಿಮ್ಮಡಿಗಳ ಬಿರುಕು ಕಾಲಿನ ಸೌಂದರ್ಯವನ್ನ ಹಾಳು ಮಾಡುವುದಲ್ಲದೆ ನೋವುಂಟುಮಾಡುತ್ತದೆ. ಹಿಮ್ಮಡಿ ಬಿರುಕನ್ನು ಮುಚ್ಚಿಟ್ಟುಕೊಳ್ಳಲು ಬಹುತೇಕರು ಚಪ್ಪಲಿ ಬದಲು ಶೂ ಬಳಸ್ತಾರೆ. ಒಡಕನ್ನು ಮುಚ್ಚಿಡುವ ಬದಲು ಅದಕ್ಕೆ ಸೂಕ್ತ ಔಷಧಿ ಮಾಡಿಕೊಂಡ್ರೆ ಚಳಿಗಾಲದಲ್ಲೂ ಸುಂದರ ಚಪ್ಪಲಿ ಧರಿಸಬಹುದು.
ಕಾಲಿನ ಒಡಕಿಗೆ ಗ್ಲಿಸರಿನ್ ತುಂಬಾನೆ ಒಳ್ಳೆಯದು. ಪ್ರತಿದಿನ ರಾತ್ರಿ ಮಲಗುವ ಮೊದಲು ಗ್ಲಿಸರಿನ್ ಹಚ್ಚಿ. ಹೀಗೆ ಮಾಡೋದ್ರಿಂದ ಬಹಳ ಬೇಗ ಒಡಕು ಮುಚ್ಚಿ ಹೋಗುತ್ತೆ. ನೋವು ಕೂಡ ಇರುವುದಿಲ್ಲ.
ತೆಂಗಿನ ಎಣ್ಣೆ ಹಿಮ್ಮಡಿಗೆ ಹಾಗೂ ಒಣಚರ್ಮಕ್ಕೆ ಉತ್ತಮ ಪರಿಹಾರ. ಇದು ಚರ್ಮದಲ್ಲಿನ ತೇವಾಂಶವನ್ನು ಕಾಪಾಡಿ, ಬ್ಯಾಕ್ಟೀರಿಯಾದ ಸೋಂಕು ಬರದಂತೆ ತಡೆಯುತ್ತದೆ. ಬೆಳಿಗ್ಗೆ ಸ್ನಾನವಾದ್ಮೇಲೆ ಅಥವಾ ರಾತ್ರಿ ಮಲಗುವ ಮೊದಲು ಕಾಲಿಗೆ ತೆಂಗಿನ ಎಣ್ಣೆ ಹಚ್ಚಿ. ಹಿಮ್ಮಡಿಗೆ ರಾತ್ರಿ ತೆಂಗಿನ ಎಣ್ಣೆ ಹಚ್ಚಿ, ಪ್ಲಾಸ್ಟಿಕ್ ಕಟ್ಟಿ ಮಲಗಿದ್ರೆ ಎಣ್ಣೆ ಹಾಸಿಗೆಗೆ ತಾಗುವುದಿಲ್ಲ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಬಾಯಾರಿಕೆ ಕಡಿಮೆ. ಹಾಗಂತ ನೀರು ಕಡಿಮೆ ಕುಡಿಯುವುದು ಒಳ್ಳೆಯದಲ್ಲ. ಬಾಯಾರಿಕೆ ಇರಲಿ ಬಿಡಲಿ ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯಿರಿ. ನೀರು ದೇಹವನ್ನಷ್ಟೇ ಅಲ್ಲ ಪಾದಗಳನ್ನೂ ತಂಪಾಗಿರಿಸುತ್ತದೆ.
ರಾತ್ರಿ ಮಲಗುವ ಮುಂಚೆ ಒಡೆದ ಜಾಗಗಳಿಗೆ ಲಿಂಬೆಹಣ್ಣನ್ನು ಸ್ಕ್ರಬ್ ಮಾಡಿ. ಬೆಳಿಗ್ಗೆ ಎದ್ದ ತಕ್ಷಣ ತೊಳೆಯೋದ್ರಿಂದ ಕಾಲು ಮೃದುವಾಗುತ್ತವೆ.