ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಬಲ ಆಟಗಾರ ಎನಿಸಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಭಾನುವಾರ ನಡೆದ 2022 ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೇ ಹಾಗೆಯೇ ಉಳಿದಿದ್ದು ಅಭಿಮಾನಿಗಳಿಗೆ ಶಾಕ್ ಆಗಿದೆ.
ಮೊದಲ ದಿನ ಮಾರಾಟವಾಗದ ಹಿನ್ನೆಲೆಯಲ್ಲಿ 2 ಕೋಟಿ ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ ಅನುಭವಿ ಬ್ಯಾಟ್ಸ್ಮನ್ ಸುರೇಶ್ ರೈನಾರನ್ನು ಎರಡನೇ ದಿನವೂ ಫ್ರಾಂಚೈಸಿಗಳು ನಿರ್ಲಕ್ಷಿಸಿದವು. ಹೀಗಾಗಿ ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರೈನಾ ಮಾರಾಟವಾಗದೇ ಉಳಿದರು.
2008ರಲ್ಲಿ ಐಪಿಎಲ್ ಸ್ಪರ್ಧೆಯು ಪ್ರಾರಂಭವಾದಾಗಿನಿಂದ ಎರಡನೇ ಬಾರಿಗೆ ಐಪಿಎಲ್ನಲ್ಲಿ ರೈನಾರ ಕಮಾಲ್ನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ 2020ರಲ್ಲಿ ಯುಎಇನಿಂದ ಹಿಂದಿರುಗಿದ್ದ ಸುರೇಶ್ ರೈನಾ ಐಪಿಎಲ್ ಸೀಸನ್ನಲ್ಲಿ ಆಟವಾಡಿರಲಿಲ್ಲ.
ಈ ನಡುವೆ ಸುರೇಶ್ ರೈನಾರ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿಯ ಉತ್ತಮ ಸ್ನೇಹಿತರಾಗಿರುವ ಸುರೇಶ್ ರೈನಾ, ಈ ಹಿಂದೆ 2022ರ ಐಪಿಎಲ್ ಸೀಸನ್ನಲ್ಲಿ ಧೋನಿ ಇಲ್ಲದಿದ್ದರೆ ನಾನೂ ಆಟವಾಡೋದಿಲ್ಲ ಎಂದು ಹೇಳಿದ್ದರು. ಅಲ್ಲದೇ 2021ರಲ್ಲಿ ಸಿಎಸ್ಕೆ ಐಪಿಎಲ್ ಟ್ರೋಫಿಯನ್ನು ಗೆದ್ದರೆ 2022ರ ಐಪಿಎಲ್ ಪಂದ್ಯವನ್ನು ಆಡಲು ನಾನು ಧೋನಿಯನ್ನು ಒಪ್ಪಿಸುವುದಾಗಿಯೂ ಹೇಳಿದ್ದರು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಹರಿದಾಡುತ್ತಿದೆ.
ಎರಡು ವರ್ಷಗಳ ಕಾಲ ಸಿಎಸ್ಕೆ ಫ್ರಾಂಚೈಸಿ ಬ್ಯಾನ್ ಆಗಿದ್ದು ಹೊರತುಪಡಿಸಿದರೆ 2008 ರಿಂದಲೂ ಧೋನಿ ಹಾಗೂ ರೈನಾ ಸಿಎಸ್ಕೆ ಪರವಾಗಿಯೇ ಆಟವಾಡುತ್ತಿದ್ದಾರೆ.
https://twitter.com/i/status/1492884881839652867