ಜಗತ್ತು ಇನ್ನೂ ಕೋವಿಡ್ 19 ಹಾಗೂ ಅದರ ರೂಪಾಂತರಗಳ ವಿರುದ್ಧ ಹೋರಾಟದಲ್ಲಿಯೇ ಇರುವ ನಡುವೆಯೇ ವುಹಾನ್ನ ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ಗಿಂತಲೂ ಹೆಚ್ಚು ಮಾರಣಾಂತಿಕ ವೈರಸ್ ಇರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನಿಯೋಕೋವ್ ಎಂಬ ಹೆಸರಿನ ಈ ವೈರಸ್ ಮಧ್ಯಪ್ರಾಚ್ಯ ದೇಶಗಳಲ್ಲಿ ಕಾಣಿಸಿಕೊಂಡಿದೆ. ಇದರ ಲಕ್ಷಣಗಳು ಕೋವಿಡ್ಗೆ ಸಂಬಂಧಿಸಿದ್ದು, ಹರಡುವಿಕೆ ಪ್ರಮಾಣ ಹಾಗೂ ಮರಣ ಪ್ರಮಾಣ ಕೋವಿಡ್ಗಿಂತಲೂ ಹೆಚ್ಚಿರುತ್ತದೆ ಎಂದು ಅಂದಾಜಿಸಲಾಗಿದೆ. ನಿಯೋಕೋವ್ ಮೂವರಲ್ಲಿ ಒಬ್ಬರ ಸಾವಿಗೆ ಕಾರಣವಾಗುತ್ತದೆ ಎಂದು ಅಂದಾಜಿಸಲಾಗಿದೆ.
ನಿಯೋಕೋವ್ ಎಂದರೇನು..?
ಈ ವೈರಸ್ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಅಂದ ಹಾಗೆ ಇದು ಹೊಸ ವೈರಸ್ ಏನಲ್ಲ. ಇದನ್ನು ಮೊದಲು ಸೌದಿ ಅರೇಬಿಯಾದಲ್ಲಿ 2012ರಲ್ಲಿ ಗುರುತಿಸಲಾಯ್ತು. ಸಂಶೋಧನೆಯ ಪ್ರಕಾರ ನಿಯೋಕೋವ್ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರಲಿದೆ ಹಾಗೂ ಕೋವಿಡ್ಗಿಂತಲೂ ವೇಗವಾಗಿ ಹರಡುತ್ತದೆ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಇದು ಸಾಮಾನ್ಯ ಶೀತ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ. ವುಹಾನ್ ವಿಶ್ವವಿದ್ಯಾಲಯ ಹಾಗೂ ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಇನ್ಸ್ಟಿಟ್ಯೂಟ್ ಆಫ್ ಬಯೋಫಿಕ್ಸ್ನ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ನಿಯೋಕೋವ್ ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳಲ್ಲಿ ಕಂಡುಬಂದಿದೆ ಎನ್ನಲಾಗಿದೆ.
ಇದು ಕೋವಿಡ್ 19 ಹೊಸ ರೂಪಾಂತರವೇ..?
ಇಲ್ಲ, ನಿಯೋಕೋವ್ ಕೋವಿಡ್ 19 ಹೊಸ ರೂಪಾಂತರವಲ್ಲ. ಇದು ಪ್ರತ್ಯೇಕ ವೈರಸ್ ಆಗಿದೆ. ಇದನ್ನು ಮೊಟ್ಟ ಮೊದಲ ಬಾರಿಗೆ 2012ರಲ್ಲಿ ವರದಿ ಮಾಡಲಾಗಿದೆ. ಇದಾದ ಬಳಿಕ 2015ರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಡೆಲ್ಟಾ ಹಾಗೂ ಓಮಿಕ್ರಾನ್ನಂತೆ ಕೋವಿಡ್ ರೂಪಾಂತರವಲ್ಲ. ಆದರೆ ಇದು ಕೋವಿಡ್ನಂತೆಯೇ ಲಕ್ಷಣಗಳನ್ನು ಹೊಂದಿರುವ ವೈರಸ್ ಆಗಿದೆ. ಇದನ್ನು ಮತ್ತೊಂದು ರೀತಿಯ ಕೊರೊನಾ ವೈರಸ್ ಎನ್ನಬಹುದು.
ಮನುಷ್ಯರ ಮೇಲೆ ನಿಯೋಕೋವ್ ಪರಿಣಾಮವೇನು..?
ಇಲ್ಲಿಯವರೆಗೆ ವೈರಸ್ ಬಾವಲಿಗಳಲ್ಲಿ ಮಾತ್ರ ಕಂಡುಬಂದಿದೆ. ಆದರೆ ರಷ್ಯಾದ ನ್ಯೂಸ್ ಪೋರ್ಟಲ್ ಸ್ಪುಟ್ನಿಕ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ ನಿಯೋಕೋವ್ ಕೋವಿಡ್ 19ನಂತೆಯೇ ಮನುಷ್ಯರಿಗೆ ತಗುಲುವ ಸಾಧ್ಯತೆ ಇದೆ ಎನ್ನಲಾಗಿದೆ.