ಪಂಜಾಬ್ನ ಮಾಜಿ ಸಿಎಂ ಅಮರೀಂದರ್ ಸಿಂಗ್ ನವಜೋತ್ ಸಿಂಗ್ ಸಿಧು ವಿಚಾರದಲ್ಲಿ ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಪಾಕಿಸ್ತಾನ ಪ್ರಧಾನಿಗೆ ನವಜೋತ್ ಸಿಂಗ್ ಸಿಧು ಹಳೆಯ ಸ್ನೇಹಿತರಿದ್ದು, ಹೀಗಾಗಿ ನಮ್ಮ ಸರ್ಕಾರದಲ್ಲಿ ನವಜೋತ್ ಸಿಂಗ್ ಸಿಧುರನ್ನು ಮರುಸೇರ್ಪಡೆ ಮಾಡುವಂತೆ ನನಗೆ ಪಾಕ್ನಿಂದ ಸಂದೇಶ ಬಂದಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೊಸದೊಂದು ಪಕ್ಷವನ್ನು ಸ್ಥಾಪಿಸಿದ್ದು, ಈ ಚುನಾವಣೆಯನ್ನು ಬಿಜೆಪಿಯೊಂದಿಗಿನ ಮೈತ್ರಿಯ ಜೊತೆಯಲ್ಲಿ ಎದುರಿಸುತ್ತಿದ್ದಾರೆ. ಇಂದು ಸಿಧು ವಿಚಾರವಾಗಿ ಮಾತನಾಡಿದ ಅವರು, ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ಸಿಧು ಅವರನ್ನು ನಿಮ್ಮ ಸರ್ಕಾರದಲ್ಲಿ ಇಟ್ಟುಕೊಂಡರೆ ನನಗೆ ಖುಷಿಯಾಗುತ್ತದೆ ಎಂದು ಹೇಳಿದ್ದರು ಅಂತಾ ಬಾಂಬ್ ಸಿಡಿಸಿದ್ದಾರೆ.
ನನ್ನ ಸರ್ಕಾರದಿಂದ ನವಜೋತ್ ಸಿಂಗ್ ಸಿಧುವನ್ನು ಕೈಬಿಟ್ಟ ಬಳಿಕ, ನನಗೆ ಪಾಕಿಸ್ತಾನದಿಂದ ಸಂದೇಶವೊಂದು ಬಂದಿತ್ತು. ನವಜೋತ್ ಸಿಂಗ್ ಸಿಧು ಪಾಕ್ ಪ್ರಧಾನಿ ಇಮ್ರಾನ್ ಖಾನ್ರ ಹಳೆಯ ಸ್ನೇಹಿತರಾಗಿದ್ದಾರೆ. ಹೀಗಾಗಿ ನೀವು ಅವರನ್ನು ನಿಮ್ಮ ಸರ್ಕಾರದಲ್ಲಿಯೇ ಇಟ್ಟುಕೊಂಡರೆ ನನಗೆ ನಿಜಕ್ಕೂ ಸಂತಸವಾಗುತ್ತದೆ. ಸಿಧು ಏನೂ ಕೆಲಸವನ್ನು ಮಾಡಿಲ್ಲವೆಂದರೆ ನೀವು ಅವರನ್ನು ಪಕ್ಷದಿಂದ ತೆಗೆದು ಹಾಕಬಹುದು ಎಂದು ಹೇಳಿದ್ದರು ಎಂದು ಬಿಜೆಪಿ ಪ್ರಧಾನಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆಯಲ್ಲಿ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ನ ಸಿಎಂ ಆಗಿದ್ದ ವೇಳೆಯಲ್ಲಿ ತಮ್ಮ ಸರ್ಕಾರದಿಂದ ನವಜೋತ್ ಸಿಂಗ್ ಸಿಧು ಕೈ ಬಿಟ್ಟಿದ್ದರು. ಕ್ರಿಕೆಟರ್ ಕಮ್ ರಾಜಕಾರಣಿ ನವಜೋತ್ ಸಿಂಗ್ ಸಿಧು ಜೊತೆಯಲ್ಲಿ ಕ್ಯಾಪ್ಟನ್ಗೆ ಅಂತಹ ಒಳ್ಳೆಯ ಸಂಬಂಧ ಮೊದಲಿನಿಂದಲೂ ಇರಲಿಲ್ಲ ಎಂಬುದನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬಹುದಾಗಿದೆ.