ಕುಡುಕರಿಗೆ ಕುಡಿಯೋದು ಬಿಟ್ಟು ಮತ್ಯಾವ ಮುಖ್ಯ ಉದ್ಯೋಗವಿಲ್ಲ. ಇಂತಹ ಕುಡುಕರು ಕುಡಿಯೋದಕ್ಕೆ ಯಾವ ಮಟ್ಟಿಗೆ ಬೇಕಾದ್ರು ಇಳಿಯುತ್ತಾರೆ. ಇದಕ್ಕೆ ಮತ್ತೊಂದು ನಿದರ್ಶನ ಎನ್ನುವಂತೆ, ಇಲ್ಲೊಬ್ಬ ಕಳ್ಳ ಎಣ್ಣೆ ಹೊಡೆಯೋದಕ್ಕೆ ಅಂತಾನೇ ಕಳ್ಳತನ ಮಾಡ್ತಿದ್ದ.
ಅಯ್ಯೋ ನಗರದಲ್ಲಿ ದಿನಕ್ಕೆ ಎಷ್ಟು ಕಳ್ಳತನ ಆಗ್ತಾವೆ ಅನ್ನೋ ಯೋಚನೆ ಕೂಡ ನಿಮಗೆ ಬರಬಹುದು. ಆದರೆ ಈತ ಕಳ್ಳತನ ಮಾಡ್ತಿದ್ದ ರೀತಿ, ಕಳ್ಳಮಾಲುಗಳನ್ನು ಸಾಗ ಹಾಕ್ತಿದ್ದ ಮಾರ್ಗ ವಿಭಿನ್ನವಾಗಿದೆ. ಕುಡಿಯೋದಕ್ಕೆ ಅಂತಾನೇ ಕಳ್ಳತನಕ್ಕಿಳಿದಿದ್ದ ಈ ಮಹಾ ಕುಡುಕ, ರಾಬರಿ ಮಾಡುವುದಕ್ಕೂ ಮುನ್ನ ಪ್ಲಾನಿಂಗ್, ಪ್ಲಾಟಿಂಗ್ ಮಾಡ್ತಿದ್ದ. ಪಿಜಿಯಲ್ಲಿರುವವರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ರನ್ ವೇನಲ್ಲಿ ಹೊತ್ತಿ ಉರಿದ ಕೋಸ್ಟ್ ಗಾರ್ಡ್ ವಿಮಾನ: ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ
ಇತ್ತೀಚೆಗಂತು ಟೆಕ್ಕಿಗಳು ಕಳ್ಳರ ಪಾಲಿನ ಕುಬೇರರಾಗಿದ್ದಾರೆ. ಈ ಕುಡುಕ ಕಳ್ಳ ಸಹ ಪಿಜಿಗಳಲ್ಲಿ ವಾಸವಾಗಿದ್ದ ಟೆಕ್ಕಿಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ. ಅದ್ರಲ್ಲು ನೈಟ್ ಶಿಫ್ಟ್ ನಲ್ಲಿದ್ದವರೇ ಈತನ ಪ್ರಮುಖ ಟಾರ್ಗೆಟ್ ಆಗಿದ್ದರು. ಐಷಾರಾಮಿ ಪಿಜಿಗಳ ಮುಂದೆ ಓಡಾಡಿಕೊಂಡು, ಪ್ರಮುಖವಾಗಿ ನೈಟ್ ಶಿಫ್ಟ್ ಮಾಡುವವರ ವಾಸ್ತವ್ಯ ಸ್ಥಳಗಳನ್ನು ಮಾರ್ಕ್ ಮಾಡಿಕೊಳ್ತಿದ್ದ. ಅವರ ವರ್ಕಿಂಗ್ ಪ್ಯಾಟರ್ನ್ ಹೇಗಿರುತ್ತದೆ ಎಂದು ಗಮನಿಸುತ್ತಿದ್ದ. ಅವರು ಮಲಗುವ ಟೈಮ್ ಸಹ ನೋಟ್ ಮಾಡಿಕೊಳ್ತಿದ್ದ. ಈ ಅಂದಾಜಿನಲ್ಲಿ ಬೆಳಗಿನ ಜಾವ 4 ರಿಂದ 5 ಘಂಟೆ ವೇಳೆಯಲ್ಲಿ ಕೈಚಳಕ ತೋರಿಸ್ತಿದ್ದ.
ವರ್ಕ್ ಪ್ರೆಷರ್ ನಲ್ಲಿರುವ ಎಷ್ಟೋ ಮಂದಿ, ಡೋರ್, ಕಿಟಕಿ ಮುಚ್ಚದೇ ನಿದ್ದೆಗೆ ಜಾರಿ ಬಿಡುತ್ತಿದ್ದರು. ಇದನ್ನೇ ಕಾದುಕೊಂಡಿರುತ್ತಿದ್ದ ಕಳ್ಳ, ಕಿಟಕಿಯ ಮೂಲಕ ಕೈ ಹಾಕಿ ಪಿಜಿ ಡೋರ್ ಒಪನ್ ಮಾಡಿ ರೂಂಗೆ ನುಗ್ಗುತ್ತಿದ್ದ. ಅಲ್ಲಿ ಕೈಗೆ ಸಿಗುತ್ತಿದ್ದ ವಸ್ತುಗಳ ಜೊತೆ, ಮುಖ್ಯವಾಗಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಗಳನ್ನು ಎಗರಿಸುತ್ತಿದ್ದ. ಈ ಕಳ್ಳನ ಬಗ್ಗೆ ದೂರು ದಾಖಲಾದ ಹಿನ್ನೆಲೆ ಬೈಯ್ಯಪ್ಪನಹಳ್ಳಿ ಪೊಲೀಸರು ಈತನಿಗೆ ಬಲೆ ಬೀಸಿ ಬಂಧಿಸಿದ್ದಾರೆ. ಬಂಧಿತ ಕುಖ್ಯಾತ ಕಳ್ಳನನ್ನು, ನಾಗಾಲ್ಯಾಂಡ್ ಮೂಲದ ಥಂಗ್ ಸಿಯಾನ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 8 ಲಕ್ಷ ಮೌಲ್ಯದ 9 ಲ್ಯಾಪ್ ಟಾಪ್ ಹಾಗೂ 5 ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ನಾಗಾಲ್ಯಾಂಡ್ ನಿವಾಸಿಯಾದ ಈತ, ಇಲ್ಲಿ ಕದ್ದ ಮಾಲುಗಳನ್ನ ಕೊರಿಯರ್ ಮೂಲಕ ಸೆಕೆಂಡ್ ಹ್ಯಾಂಡ್ ವಸ್ತುಗಳಂತೆ ನಾಗಾಲ್ಯಾಂಡ್ ನಲ್ಲಿ ಹಲವರಿಗೆ ಮಾರಾಟ ಮಾಡಿದ್ದಾನೆ. ಐವತ್ತು ಸಾವಿರಕ್ಕೂ ಹೆಚ್ಚು ಬೆಲೆಬಾಳುವ ಲ್ಯಾಪ್‌ಟಾಪ್ ಗಳನ್ನು ಐದು ಸಾವಿರಕ್ಕೆ ಮಾರುತ್ತಿದ್ದ, ಈತ ಆ ದುಡ್ಡನ್ನು ಯುಪಿಐ ಮೂಲಕ ಪಡೆಯುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.