ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿರುವ ನಡುವೆಯೇ ಬಿಜೆಪಿಯ ನಾಯಕ ಹಾಗೂ ಕೈಸರ್ಗಂಜ್ನ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶ್ರೀರಾಮನ ವಂಶಸ್ಥರು ಎಂದು ಹೇಳಿದ್ದಾರೆ.
ಓವೈಸಿ ನನ್ನ ಹಳೆಯ ಸ್ನೇಹಿತರು. ನನಗೆ ತಿಳಿದಿರುವ ಮಾಹಿತಿಯ ಪ್ರಕಾರ ಅವರು ಮೊದಲು ಕ್ಷತ್ರಿಯ(ಹಿಂದೂ)ರಾಗಿದ್ದರು. ಓವೈಸಿ ಭಗವಾನ್ ಶ್ರೀರಾಮಚಂದ್ರನ ವಂಶಸ್ಥರೇ ಹೊರತು ಇರಾನ್ಗೆ ಸೇರಿದವರಲ್ಲ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ. ಗೊಂಡಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ತಮ್ಮ ಪುತ್ರನ ಪರವಾಗಿ ಪ್ರಚಾರ ಮಾಡುವ ವೇಳೆಯಲ್ಲಿ ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ.
ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಟೀಕಿಸಿದ ಸಿಂಗ್, ಅಖಿಲೇಶ್ ಮತ್ತು ಓವೈಸಿ ಮುಸ್ಲಿಂ ಸಮುದಾಯದ ನಾಯಕತ್ವವನ್ನು ಪಡೆಯಲು ಹೋರಾಡುತ್ತಿದ್ದಾರೆ ಎಂದು ಹೇಳಿದರು.