ತಿಳಿಸಾರು ಬಹುತೇಕರ ಫೇವರಿಟ್. ಬಿಸಿಬಿಸಿ ಅನ್ನಕ್ಕೆ ಟೊಮೇಟೊ ತಿಳಿಸಾರು, ತುಪ್ಪ, ಹಪ್ಪಳ ಒಳ್ಳೆಯ ಕಾಂಬಿನೇಶನ್ ತಿಳಿಸಾರು ನೋಡಿದ ಕೂಡಲೇ ಹಸಿವನ್ನು ಹೆಚ್ಚಿಸುವ ಹಾಗೆ ಮಾಡುವ ಆಕರ್ಷಕ ಬಣ್ಣ ಹೊಂದಿರುವುದರ ಜೊತೆಗೆ ತಿನ್ನಲು, ಕುಡಿಯಲು ಬೊಂಬಾಟ್ ರುಚಿ ಕೊಡುತ್ತದೆ.
ಇದನ್ನು ಬಹಳ ಕಡಿಮೆ ಸಮಯದಲ್ಲಿ, ಕಡಿಮೆ ಸಾಮಗ್ರಿ ಇಂದ ಮಾಡಬಹುದು. ಟೊಮೇಟೊ ತಿಳಿಸಾರು ಮಾಡಲು ಬೇಕಾಗುವ ಸಾಮಗ್ರಿ ಹಾಗೂ ವಿಧಾನ ಹೀಗಿದೆ.
ಅರ್ಧ ಹಿಡಿ ಹೆಸರು ಬೆಳೆ, ಚೆನ್ನಾಗಿ ಹಣ್ಣಾದ ನಾಟಿ ಟೊಮೇಟೊ 3-4, ಬೆಳ್ಳುಳ್ಳಿ 4 ಎಸಳು, ಜೀರಿಗೆ ಮತ್ತು ಮೆಣಸು – 1 ಚಮಚ, ರಸಂ ಪುಡಿ – 2 ಚಮಚ, ಒಣ ಮೆಣಸಿನಕಾಯಿ – 2, ಕೊತ್ತಂಬರಿ ಸೊಪ್ಪು, ಕರಿಬೇವು ಹಾಗೂ ಸಾಸಿವೆ, ಒಗ್ಗರಣೆಗೆ ಸ್ವಲ್ಪ ಎಣ್ಣೆ.
ಹೆಸರು ಬೇಳೆ ಹಾಗೂ ಟೊಮೇಟೊ, ಜೀರಿಗೆ ಮತ್ತು ಮೆಣಸು ಇವುಗಳನ್ನು ಬೇಯಿಸಿಕೊಳ್ಳಿ. ಟೊಮೇಟೊ ಸಿಪ್ಪೆ ಬಳಸಲು ಇಷ್ಟಪಡದವರು ಇದನ್ನು ಬೇಯಿಸಿದ ನಂತರ ತೆಗೆದು ಹಾಕಬಹುದು. ಬೆಂದ ಪದಾರ್ಥ ತಣ್ಣಗಾದ ಮೇಲೆ ನೀರು ಬಸಿದು, ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ ಇದಕ್ಕೆ ಬೆಳ್ಳುಳ್ಳಿ ಎಸಳು ಸೇರಿಸಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಬಸಿದ ನೀರು ಹಾಕಿ ಸಾರಿನ ಪುಡಿ ಸೇರಿಸಿ ಒಂದೆರಡು ನಿಮಿಷ ಕುದಿಸಿ. ಇದಕ್ಕೆ ರುಬ್ಬಿದ ಟೊಮೇಟೊ, ಹೆಸರುಬೇಳೆ ಮಿಶ್ರಣವನ್ನು ಸೇರಿಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪು ಹಾಕಿ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ಘಮಘಮ ಎನ್ನುವ ಟೊಮೋಟೊ ತಿಳಿ ಸಾರು ಸವಿಯಬಹುದು.