ಬೆಳಗಿನ ತಿಂಡಿಗೆ ಇಡ್ಲಿಯನ್ನು ಮಾಡಿ ತಿಂದಾಯಿತು. ಇನ್ನು ಉಳಿದ ಇಡ್ಲಿಯನ್ನು ಏನು ಮಾಡುವುದು ಅಂತ ಯೋಚಿಸುತ್ತಿದ್ದೀರಾ. ಹಾಗಿದ್ದರೆ ಸಂಜೆ ಉಳಿದ ಇಡ್ಲಿಯಿಂದ ಬಿಸಿಬಿಸಿಯಾಗಿ ಪಕೋಡ ತಯಾರಿಸಿ ರುಚಿ ಸವಿಯಿರಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಇಡ್ಲಿ 4
ಕಡಲೆಹಿಟ್ಟು 1 ಕಪ್
ಅಕ್ಕಿಹಿಟ್ಟು 1/2 ಕಪ್
ಕತ್ತರಿಸಿದ ಈರುಳ್ಳಿ 1 ಕಪ್
ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ಹೆಚ್ಚಿದ ಪುದೀನಾ ಸೊಪ್ಪು ಸ್ವಲ್ಪ
ಕೊಬ್ಬರಿ ತುಂಡುಗಳು 8-10
ಅಚ್ಚ ಖಾರದ ಪುಡಿ 2 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಜೀರಿಗೆ 2 ಚಮಚ
ಅಡುಗೆ ಸೋಡಾ 1/4 ಚಮಚ
ಎಣ್ಣೆ ಕರಿಯಲು
ಮಾಡುವ ವಿಧಾನ
ಮೊದಲು ಇಡ್ಲಿಗಳನ್ನು ಪುಡಿಮಾಡಿ ಕಡಲೆಹಿಟ್ಟು ಹಾಗೂ ಅಕ್ಕಿ ಹಿಟ್ಟನ್ನು ಸೇರಿಸಿ. ಈ ಮಿಶ್ರಣಕ್ಕೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಕೊಬ್ಬರಿ ತುಂಡು, ಅಚ್ಚ ಖಾರದಪುಡಿ, ಉಪ್ಪು, ಅಡುಗೆ ಸೋಡಾ ಸೇರಿಸಿ.
ಸ್ವಲ್ಪ ನೀರು ಹಾಕಿ ಪಕೋಡ ಹದಕ್ಕೆ ಸ್ವಲ್ಪ ಗಟ್ಟಿಯಾಗಿ ಕಲಸಿಡಿ. ಕಲಸಿದ ಮಿಶ್ರಣದಿಂದ ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಪಕೋಡ ಆಕಾರದಲ್ಲಿ ತಟ್ಟಿ, ಕಾಯಿಸಿದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಬೇಕು.
ಈಗ ಬಿಸಿಬಿಸಿ ಇಡ್ಲಿ ಪಕೋಡ ಸವಿಯಲು ಸಿದ್ಧ. ಇದನ್ನು ಕಾಯಿ ಚಟ್ನಿಯೊಂದಿಗೆ ತಿಂದರೆ ಇನ್ನಷ್ಟು ರುಚಿಯಾಗಿರುತ್ತದೆ.