ಕಳೆದ ಬಾರಿ ಕೈ ತಪ್ಪಿ ಹೋಗಿದ್ದ ಅಧಿಕಾರ ಈ ಬಾರಿ ತಪ್ಪಿ ಹೋಗಬಾರದು. ಹೇಗಾದರೂ ಮಾಡಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದೇ ತೀರಬೇಕು ಎಂದು ಪಣತೊಟ್ಟಿರುವ ಸಮಾಜವಾದಿ ಪಕ್ಷ ದಿನಕ್ಕೊಂದು ರಣತಂತ್ರ ಹೂಡುತ್ತಿದೆ. ಈಗಾಗಲೇ ಯೋಗಿ ಆದಿತ್ಯನಾಥ್ ಸಂಪುಟದ ಸದಸ್ಯರನ್ನೇ ತನ್ನ ಪಕ್ಷದತ್ತ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಸಮಾಜವಾದಿ ಪಕ್ಷ ಇದೀಗ ಕ್ಷೇತ್ರ ಆಯ್ಕೆಯಲ್ಲಿಯೂ ಭಾರೀ ಮುಂಜಾಗ್ರತೆ ವಹಿಸುತ್ತಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಯಾದವ್ ಕುಟುಂಬ ಹೆಚ್ಚು ಬಲಶಾಲಿ ಎನಿಸಿರುವ ಕ್ಷೇತ್ರದಿಂದಲೇ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಉನ್ನತ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಅಖಿಲೇಶ್ ಯಾದವ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಣಿಪುರಿಯ ಕರ್ಹಾಲ್ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
1993 ರಿಂದಲೂ ಕರ್ಹಾಲ್ನಲ್ಲಿ ಸಮಾಜವಾದಿ ಪಕ್ಷವೇ ವಿಜಯದ ಪತಾಕೆಯನ್ನು ಹಾರಿಸುತ್ತಾ ಬಂದಿದೆ. 2002 ಹಾಗೂ 2007ರಲ್ಲಿ ಮಾತ್ರ ಬಿಜೆಪಿಯು ಕರ್ಹಾಲ್ನಲ್ಲಿ ಗೆಲುವಿನ ನಗೆ ಬೀರಿತ್ತು.