ಉತ್ತರಪ್ರದೇಶದ ಉನ್ನತ ಶಿಕ್ಷಣ ಸೇವಾ ಆಯೋಗದ ವೆಬ್ಸೈಟ್ನ್ನು ಹ್ಯಾಕ್ ಮಾಡಿದ ಹ್ಯಾಕರ್ಗಳು ಕೆಲ ಪ್ರಸಿದ್ಧ ಕವಿಗಳ ಹೆಸರಿನಲ್ಲಿದ್ದ ಅಲಹಾಬಾದಿ ಎಂಬ ಪದವನ್ನು ಪ್ರಯಾಗ್ ರಾಜ್ ಎಂದು ಬದಲಿಸಿದ್ದಾರೆ ಎನ್ನಲಾಗಿದೆ. ಐತಿಹಾಸಿಕ ನಗರದ ಹೆಸರನ್ನು ಬದಲಾಯಿಸಿದ್ದಕ್ಕೆ ಆಕ್ರೋಶಗೊಂಡು ಈ ರೀತಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರಯಾಗ್ರಾಜ್ ಮೂಲದ ಆಯೋಗವು ತನ್ನ ಹಿಂದಿ ವೆಬ್ಸೈಟ್ನ್ನು ಹ್ಯಾಕರ್ಗಳ ಕೈನಿಂದ ಬಚಾವ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದೀಗ ಇಂಗ್ಲೀಷ್ ವೆಬ್ಸೈಟ್ನ್ನೂ ಮರುಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದು ಆಯೋಗದ ಅಧ್ಯಕ್ಷ ಈಶ್ವರ್ ಚರಣ್ ವಿಶ್ವಕರ್ಮ ಹೇಳಿದ್ದಾರೆ. ಇನ್ನು ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಕೋರಿ ನಗರದ ಸೈಬರ್ ಸೆಲ್ಗೆ ದೂರು ನೀಡಿದ್ದೇವೆ ಎಂದು ಡಾ. ವಿಶ್ವಕರ್ಮ ಹೇಳಿದ್ದಾರೆ.
ಅಲಹಾಬಾದ್ ಹೆಸರಿನ ಬದಲಾವಣೆಯ ಬಗ್ಗೆ ಕೆಲವು ಕಿಡಿಗೇಡಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನವುದು ಈ ಮೂಲಕ ಸ್ಪಷ್ಟವಾಗಿದೆ ಎಂದು ಡಾ. ವಿಶ್ವಕರ್ಮ ಹೇಳಿದ್ದಾರೆ. ವೆಬ್ಸೈಟ್ ಈ ರೀತಿ ಆಗುವಲ್ಲಿ ಆಯೋಗವು ಯಾವುದೇ ರೀತಿಯಲ್ಲಿ ಪಾತ್ರ ವಹಿಸಿಲ್ಲ ಎಂದೂ ಇದೇ ವೇಳೆ ಹೇಳಿದರು.
ಹೆಸರಾಂತ ಕವಿಗಳಾದ ಅಕ್ಬರ್ ಅಲಹಾಬಾದಿ, ತೇಜ್ ಅಲಹಾಬಾದಿ ಹಾಗೂ ರಶೀದ್ ಅಲಹಾಬಾದಿ ಸೇರಿದಂತೆ ಅನೇಕರ ಹೆಸರುಗಳಲ್ಲಿ ಪ್ರಯಾಗ್ ರಾಜ್ ಎಂದು ಸೇರಿಸಲಾಗಿದೆ. ಈ ಹೆಸರುಗಳನ್ನು ಹಿಂದಿ ವೆಬ್ಸೈಟ್ನಲ್ಲಿ ಸರಿಪಡಿಸಿದ್ದೇವೆ. ಇಂಗ್ಲೀಷ್ ವೆಬ್ಸೈಟ್ನಲ್ಲಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ವಿಶ್ವ ಕರ್ಮ ಹೇಳಿದ್ದಾರೆ