ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆ ಎಂಬಂತೆ ‘ಲಡಕಿ ಹೂ, ಲಡ್ ಸಕ್ತಿ ಹೂʼ ಎಂಬ ಕಾಂಗ್ರೆಸ್ ಅಭಿಯಾನದ ಪೋಸ್ಟರ್ ಗರ್ಲ್ ವಂದನಾ ಸಿಂಗ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಹೈಕಮಾಂಡ್ನ ನಿರ್ಲಕ್ಷ್ಯವನ್ನು ಸಹಿಸಲಾಗದೇ ಈ ನಿರ್ಧಾರ ಕೈಗೊಂಡಿರುವುದಾಗಿ ವಂದನಾ ಸಿಂಗ್ ಹೇಳಿದ್ದಾರೆ.
ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದವರಿಗೆ ಮಾತ್ರ ಹೈಕಮಾಂಡ್ ಮಣೆ ಹಾಕುತ್ತಿದೆ. ನಾನು ಕಾಂಗ್ರೆಸ್ಗಾಗಿ ಆರು ವರ್ಷಗಳ ಕಾಲ ದುಡಿದಿದ್ದೇನೆ. ನಾನು ಮಹಿಳಾ ವಿಂಗ್ನ ಉಪಾಧ್ಯಕ್ಷೆಯಾಗಿದ್ದೇನೆ. ಆದರೆ ನಮಗೆ ಇಲ್ಲಿಯವರೆಗೂ ಪ್ರಿಯಾಂಕಾ ಗಾಂಧಿ ಜೊತೆ ಮಾತನಾಡಲು ಅವಕಾಶವೇ ಸಿಕ್ಕಿಲ್ಲ. ನಮಗಾಗಿ ನಾವು ಮಾತನಾಡಲು ಈ ಪಕ್ಷದಲ್ಲಿ ಸಾಧ್ಯವೇ ಇಲ್ಲ ಎಂದು ವಂದನಾ ಹೇಳಿದ್ದಾರೆ.
ಈ ಹಿಂದೆ ಪೋಸ್ಟರ್ನಲ್ಲಿದ್ದ ಪ್ರಿಯಾಂಕಾ ಮೌರ್ಯ ಕೂಡ ಬಿಜೆಪಿ ಸೇರ್ಪಡೆಯಾಗಿದ್ದರು. ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಪ್ರಿಯಾಂಕಾ ಮೌರ್ಯ ಆರೋಪಿಸಿದ್ದರು.