ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿರೋದು ಒಂದು ಕಡೆಯಾದ್ರೆ, ಮತ್ತೊಂದೆಡೆ ಮಳೆಯೇ ಆಗದಂತಹ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಇದರಿಂದ ಬರಭೂಮಿಗಳು ಕೂಡ ಜೀವಸೆಲೆ ನೋಡುವ ಭಾಗ್ಯ ಕರುಣಿಸಿದ್ದಾನೆ ವರುಣ ದೇವ. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಭೂಮಿಯ ಅಂತರ್ಜಲ ಮಟ್ಟವೂ ಹೆಚ್ಚಾಗಿದೆಯಂತೆ.
ಹೌದು, ರಾಜ್ಯದಲ್ಲಿ ಹೆಚ್ಚಿನ ಮಳೆಯಾದ ಹಿನ್ನೆಲೆ ಬಹುತೇಕ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಬತ್ತಿ ಹೋಗಿದ್ದ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿದೆಯಂತೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಹುತೇಕ ಕೆರೆಗಳು ಕೋಡಿ ಹೊಡೆದಿವೆ. ಚೆಕ್ ಡ್ಯಾಂಗಳಿಗೆ ದಾಖಲೆ ಮಟ್ಟದಲ್ಲಿ ನೀರು ಹರಿದು ಬಂದಿದೆಯಂತೆ. ಹೀಗಾಗಿ ಕೆರೆ ಮತ್ತು ಚೆಕ್ ಡ್ಯಾಂಗಳಲ್ಲಿನ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಮಟ್ಟ ಹೆಚ್ಚಾಗಿದೆಯಂತೆ.
ಒಂದು ಕಾಲದಲ್ಲಿ ಅಂದರೆ 2001ರ ನಂತರ ರಾಜ್ಯದಲ್ಲಿ ಅಂತರ್ಜಲದ ಬಳಕೆ ಹೆಚ್ಚಾಗಿತ್ತು. ರೈತರು ಬೋರ್ ವೆಲ್ ಕೊರೆಸುವುದು ಹೆಚ್ಚಾಗಿದ್ದರಿಂದ ಅಂತರ್ಜಲದ ಮಟ್ಟ ಕಡಿಮೆಯಾಗಿತ್ತು. ಅದರಲ್ಲೂ ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗದಂತಹ ಬಯಲುಸೀಮೆ ಜಿಲ್ಲೆಗಳಲ್ಲಿ 1,500 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಆದರೆ ಈಗ ಅಂತರ್ಜಲ ಹೆಚ್ಚಾಗಿದೆ.