ರಷ್ಯಾವು ಉಕ್ರೇನ್ ಗಡಿಯ ಸಮೀಪದಲ್ಲಿ ಶಸ್ತ್ರಸಜ್ಜಿತ ಉಪಕರಣಗಳು ಹಾಗೂ ಸೇನಾಪಡೆಗಳನ್ನು ನಿಯೋಜನೆ ಮಾಡುತ್ತಿದೆ ಎಂದು ಅಮೆರಿಕವು ಹೇಳಿದೆ. ಅಮೆರಿಕದ ಖಾಸಗಿ ಕಂಪನಿಯು ಉಪಗ್ರಹ ಚಿತ್ರಗಳನ್ನು ಪ್ರಸ್ತುತಪಡಿಸುವ ಮೂಲಕ ಈ ಮಾಹಿತಿಯನ್ನು ನೀಡಿದೆ.
ಹೊಸ ಚಟುವಟಿಕೆಯು ಹೆಚ್ಚಿದ ಮಿಲಿಟರಿ ಸನ್ನದ್ಧತೆಯನ್ನು ಸೂಚಿಸುತ್ತದೆ ಎಂದು ಅಮೆರಿಕ ಮೂಲದ ಮ್ಯಾಕ್ಸರ್ ಟೆಕ್ನಾಲಜೀಸ್ ನಿರ್ದೇಶಕರು ಹೇಳಿದ್ದಾರೆ. ಅನೇಕ ವಾರಗಳ ಕಾಲ ರಷ್ಯಾದ ಸೇನಾ ಚಟುವಟಿಕೆಯನ್ನು ಟ್ರ್ಯಾಕ್ ಮಾಡಿರುವ ಖಾಸಗಿ ಕಂಪನಿಯು ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಈ ಹೊಸ ಚಟುವಟಿಕೆಯು ರಷ್ಯಾದಲ್ಲಿ ಈ ಹಿಂದೆ ಇದ್ದ ಯುದ್ಧ ಚಟುವಟಿಕೆಗಳಲ್ಲಿ ಆಗಿರುವ ಬದಲಾವಣೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಮ್ಯಾಕ್ಸರ್ ಹೇಳಿದರು. ಉಪಗ್ರಹಗಳ ಚಿತ್ರಗಳು ನೀಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ 13ರ ಸುಮಾರಿಗೆ ರಷ್ಯಾದ ಸೊಲಿಟಿಯಲ್ಲಿರುವ ಮಿಲಿಟರಿ ಗ್ಯಾರಿಸನ್ ಸುತ್ತಲೂ ಯುದ್ಧ ಗುಂಪುಗಳ ದೊಡ್ಡ ನಿಯೋಜನೆಯನ್ನು ಗಮನಿಸಲಾಗಿದೆ ಎಂದು ಮ್ಯಾಕ್ಸರ್ ಹೇಳಿದರು.