ದೇಶದ ಕೆಲವು ಭಾಗಗಳಲ್ಲಿ ಹಬ್ಬದ ಸಂದರ್ಭ ಕೋಮು ಸೌಹಾರ್ದ ಕದಡುವಂತಹ ಘಟನೆಗಳು ನಡೆಯುತ್ತಿರುತ್ತವೆ. ಹೀಗಾಗಿಯೇ ಗಣಪತಿ, ರಂಜಾನ್ ಮೊದಲಾದ ಹಬ್ಬಗಳ ವೇಳೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತದೆ.
ಆದರೆ ಇದಕ್ಕೆ ವಿಭಿನ್ನವೆಂಬಂತೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಪಟ್ಟಣದ 7ನೇ ವಾರ್ಡ್ ವ್ಯಾಪ್ತಿಯ ರಾಜೀವ್ ನಗರದ ವಿನಾಯಕ ಸಂಘದವರು ಕೋಮು ಸೌಹಾರ್ದತೆಯನ್ನು ಮೆರೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಸಂಘದಿಂದ ನಡೆಯುತ್ತಿರುವ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಕಳೆದ 13 ವರ್ಷಗಳಿಂದ ಮುಸ್ಲಿಂ ಮಹಿಳೆ ಜುಬೇದಾ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಅವರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು, ಹೀಗಾಗಿ ಈ ಬಾರಿಯ ಗಣೇಶೋತ್ಸವ ಮತ್ತಷ್ಟು ಗಮನ ಸೆಳೆದಿದೆ.
ಮತ್ತೊಂದು ಆಸಕ್ತಿಕರ ಸಂಗತಿ ಎಂದರೆ ರಾಜೀವ್ ನಗರದ ವಿನಾಯಕ ಸಂಘದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜದವರು ಸದಸ್ಯರಾಗಿದ್ದಾರೆ.