ಮಾವಿನ ಹಣ್ಣಿನ ಶ್ರೀಖಂಡ ಗುಜರಾತ್ ಮತ್ತು ಮಹಾರಾಷ್ಟ್ರದ ಸಾಂಪ್ರದಾಯಿಕ ತಿನಿಸು. ಬಿರು ಬೇಸಿಗೆಯಲ್ಲಿ ಊಟವಾದ ನಂತರ ಶ್ರೀಖಂಡ ಸವಿಯಬಹುದು. ಪೂರಿ ಮತ್ತು ಚಪಾತಿ ಜೊತೆಗೂ ಇದನ್ನು ಸರ್ವ್ ಮಾಡಬಹುದು. ಮಾವಿನ ಹಣ್ಣಿನ ಸೀಸನ್ ನಲ್ಲಿ ಈ ಸಿಂಪಲ್ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿ :
2 ಕಪ್ ತಾಜಾ ಮತ್ತು ಗಟ್ಟಿ ಮೊಸರು, 1 ಕಪ್ ಮಾವಿನ ಹಣ್ಣಿನ ತಿರುಳು, ಕಾಲು ಕಪ್ ಪುಡಿ ಮಾಡಿದ ಸಕ್ಕರೆ, ಹಾಲಿನಲ್ಲಿ ನೆನೆಸಿದ ಚಿಟಿಕೆ ಕೇಸರಿ, ಕಾಲು ಚಮಚ ಏಲಕ್ಕಿ ಪುಡಿ, ಹೆಚ್ಚಿದ ಬಾದಾಮಿ ಮತ್ತು ಪಿಸ್ತಾ, ನಾಲ್ಕಾರು ಮಾವಿನ ಹಣ್ಣಿನ ತುಂಡು.
ಮಾಡುವ ವಿಧಾನ :
ಮೊಸರನ್ನು ತೆಳುವಾದ ಬಟ್ಟೆಯೊಂದರಲ್ಲಿ ಹಾಕಿ ಅದರಲ್ಲಿರುವ ನೀರಿನ ಅಂಶವನ್ನೆಲ್ಲ ತೆಗೆದುಬಿಡಿ. ನಂತರ ಅದನ್ನು ಬೌಲ್ ನಲ್ಲಿ ಹಾಕಿಕೊಂಡು ಪೂರ್ತಿ ಮೃದುವಾಗುವವರೆಗೆ ವಿಸ್ಕ್ ಮಾಡಿ. ಬಳಿಕ ಮಾವಿನ ಹಣ್ಣಿನ ತಿರುಳು, ಸಕ್ಕರೆ ಪುಡಿ, ಏಲಕ್ಕಿ ಪುಡಿ, ಹಾಲಿನಲ್ಲಿ ನೆನೆಸಿದ ಕೇಸರಿ ಬೆರೆಸಿ ಚೆನ್ನಾಗಿ ಸೌಟಿನಿಂದ ಕಲಕಿ. ಬಳಿಕ ಹೆಚ್ಚಿದ ಬಾದಾಮಿ ಮತ್ತು ಪಿಸ್ತಾವನ್ನು ಹಾಕಿ. ಸುಂದರವಾದ ಕಪ್ ನಲ್ಲಿ ಹಾಕಿ ಡ್ರೈಫ್ರೂಟ್ಸ್ ಮತ್ತು ಮಾವಿನ ಹಣ್ಣುಗಳ ತುಂಡನ್ನು ಹಾಕಿ ಅಲಂಕರಿಸಿದರೆ ಮಾವಿನ ಹಣ್ಣಿನ ಶ್ರೀಖಂಡ ರೆಡಿ. ಸ್ವಲ್ಪ ಹೊತ್ತು ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ಬಳಿಕ ಸರ್ವ್ ಮಾಡಿ.