ಪಾಯಸ ಸವಿಯುವ ಆಸೆ ಆದರೆ ಒಮ್ಮೆ ಈ ರುಚಿಕರವಾದ ಎಳನೀರಿನ ಪಾಯಸ ಮಾಡಿಕೊಂಡು ಸವಿಯಿರಿ. ತುಂಬಾ ರುಚಿಕರವಾಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ.
ಒಂದು ಮಿಕ್ಸಿ ಜಾರಿಗೆ 1 ಕಪ್ ಎಳನೀರಿನ ಕಾಯಿಯನ್ನು ಹಾಕಿ ಒಂದು ಸುತ್ತು ರುಬ್ಬಿಕೊಳ್ಳಿ. ನಂತರ 1 ಕಪ್ ಎಳನೀರಿನ ನೀರು ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಿ. ½ ಕಪ್ ನಷ್ಟು ಎಳನೀರಿನ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿಕೊಂಡಿರಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ½ ಲೀಟರ್ ಹಾಲು ಹಾಕಿ ಅದು ಕುದಿಯಲು ಆರಂಭಿಸಿದಾಗ 1 ಕಪ್ ಮಿಲ್ಕ್ ಮೇಡ್ ಹಾಕಿ ಕುದಿಸಿಕೊಳ್ಳಿ. ನಂತರ 150 ಗ್ರಾಂ ಸಕ್ಕರೆ ಸೇರಿಸಿ ಸಕ್ಕರೆ ಕರಗುವವರೆಗೆ ಚೆನ್ನಾಗಿ ಕೈಯಾಡಿಸಿ.
ನಂತರ ಚಿಟಿಕೆ ಪಚ್ಚ ಕರ್ಪೂರ, ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕತ್ತರಿಸಿಟ್ಟುಕೊಂಡ ಎಳನೀರಿನ ಕಾಯಿಯನ್ನು ಹಾಕಿ ಸ್ವಲ್ಪ ಕುದಿಸಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ 1 ಚಮಚ ತುಪ್ಪದಲ್ಲಿ 5 ಗೋಡಂಬಿಯನ್ನು ಹುರಿದುಕೊಂಡು ಅದನ್ನು ಪಾಯಸಕ್ಕೆ ಹಾಕಿ. ನಂತರ ಈ ಪಾಯಸ ತಣ್ಣಗಾದ ಮೇಲೆ ರುಬ್ಬಿಟ್ಟುಕೊಂಡ ಎಳನೀರಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಫ್ರಿಡ್ಜ್ ನಲ್ಲಿಡಿ.