ಅನ್ನದ ಜತೆ ಸೈಡ್ ಡಿಶ್ ಆಗಿ ಏನಾದರೂ ಇದ್ದರೆ ಊಟ ಬೇಗ ಹೊಟ್ಟೆಗೆ ಹೋಗುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಎಗ್ ಚಿಲ್ಲಿ ಇದೆ. ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಮೊಟ್ಟೆ-4 (ಬೇಯಿಸಿ ಸಿಪ್ಪೆ ತೆಗೆದುಕೊಂಡಿದ್ದು), ಎಣ್ಣೆ-ಕರಿಯಲು ಬೇಕಾಗುವಷ್ಟು, ಬೆಳ್ಳುಳ್ಳಿ-1 ಟೇಬಲ್ ಸ್ಪೂನ್ (ಕತ್ತರಿಸಿಕೊಂಡಿದ್ದು), ಶುಂಠಿ-1 ಟೇಬಲ್ ಸ್ಪೂನ್ (ಕತ್ತರಿಸಿಕೊಂಡಿದ್ದು), ಈರುಳ್ಳಿ-1, (ಸಣ್ಣದ್ದಾಗಿ ಕತ್ತರಿಸಿಕೊಂಡಿದ್ದು), ಕ್ಯಾಪ್ಸಿಕಂ-1 (ಸಣ್ಣದ್ದಾಗಿ ಕತ್ತರಿಸಿಕೊಂಡಿದ್ದು), ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ-1 ಟೀ ಸ್ಪೂನ್, ಖಾರದ ಪುಡಿ-2 ಟೀ ಸ್ಪೂನ್, ಕಾಳುಮೆಣಸಿನ ಪುಡಿ-1 ಟೀ ಸ್ಪೂನ್, ಮೈದಾ-1/2 ಕಪ್, ಕಾರ್ನ್ ಫ್ಲೋರ್-1/2 ಕಪ್, ಬೇಕಿಂಗ್ ಪೌಡರ್-1 ಟೀ ಸ್ಪೂನ್, ನೀರು-ಅಗತ್ಯವಿರುವಷ್ಟು, ಟೊಮೆಟೊ-ಕೆಚಪ್-3 ಟೇಬಲ್ ಸ್ಪೂನ್, ಸೋಯಾ ಸಾಸ್-1 ಟೀ ಸ್ಪೂನ್, ವಿನೇಗರ್-1 ½ ಟೀ ಸ್ಪೂನ್, ಗ್ರೀನ್ ಚಿಲ್ಲಿ ಸಾಸ್-2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಕೆಚಪ್, ಸೋಯಾ ಸಾಸ್, ವಿನೇಗರ್, ಗ್ರೀನ್ ಚಿಲ್ಲಿ ಸಾಸ್ ಅನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕಡೆ ಇಟ್ಟುಕೊಳ್ಳಿ. ಇನ್ನೊಂದು ಬೌಲ್ ಗೆ ಮೈದಾ, ಕಾರ್ನ್ ಫ್ಲೋರ್, ಬೇಕಿಂಗ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು, ಹಾಕಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ನಂತರ ಮೊಟ್ಟೆಯನ್ನು ಎರಡು ಭಾಗವಾಗಿ ಕತ್ತರಿಸಿಕೊಂಡು ಈ ಮಿಶ್ರಣದಲ್ಲಿ ಅದ್ದಿಕೊಳ್ಳಿ. ಗ್ಯಾಸ್ ಮೇಲೆ ಎಣ್ಣೆ ಬಾಣಲೆಯಲ್ಲಿಟ್ಟು ಅದು ಬಿಸಿಯಾಗುತ್ತಲೇ ಮೊಟ್ಟೆ ಹಾಕಿ ಹೊಂಬಣ್ಣ ಬರುವವರೆಗೆ ಕರಿಯಿರಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾಗುತ್ತಲೇ 1 ಟೀ ಸ್ಪೂನ್ ಎಣ್ಣೆ ಹಾಕಿ ನಂತರ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಫ್ರೈ ಮಾಡಿ ಇದಾದ ನಂತರ ಕ್ಯಾಪ್ಸಿಕಂ ಸೇರಿಸಿ 2 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ರೆಡಿ ಮಾಡಿಟ್ಟುಕೊಂಡ ಸಾಸ್ ಖಾರದ ಪುಡಿ, ಕಾಳುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಸೇರಿಸಿ ಇದು ದಪ್ಪಗಾಗುವವರೆಗೆ ಮಿಕ್ಸ್ ಮಾಡಿ. ನಂತರ ಇದಕ್ಕೆ ಫ್ರೈ ಮಾಡಿಕೊಂಡ ಮೊಟ್ಟೆ ಸೇರಿಸಿ ಮಿಕ್ಸ್ ಮಾಡಿ ಬಿಸಿ ಇರುವಾಗಲೇ ಸರ್ವ್ ಮಾಡಿ.