ಪಿಟ್ಬುಲ್ ವಿಶ್ವದ ಅತ್ಯಂತ ಅಪಾಯಕಾರಿ ನಾಯಿಗಳಲ್ಲೊಂದು. ಈ ಶ್ವಾನ ಯಾರಿಗಾದ್ರೂ ಕಚ್ಚಿದರೆ ಮೂಳೆಗಳು ಮುರಿದು ಹೋಗುತ್ತವೆ. ಕಚ್ಚಿ ಹಿಡಿದಾಗ ಬಿಡಿಸಿಕೊಳ್ಳೋದಂತೂ ಬಹಳ ಕಷ್ಟ. ಪಿಟ್ಬುಲ್ ಅಪಾರ ಶಕ್ತಿವಂತ ನಾಯಿ. ಇದನ್ನು ಅನ್ಯಶ್ವಾನಗಳಿಗೆ, ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹಾನಿ ಮಾಡಲು ಸಾಕುವುದಿಲ್ಲ. ಪಿಟ್ಬುಲ್ ಸಹಾಯದಿಂದ ಹಣ ಗಳಿಸೋದು ಸಾಕುವ ಮೊದಲ ಉದ್ದೇಶ.
ನಾಯಿಗಳ ಕಾದಾಟವನ್ನು ಮನರಂಜನೆಯಾಗಿ ಇಷ್ಟಪಡುವವರಿರುತ್ತಾರೆ, ಇಂತಹ ಸ್ಪರ್ಧೆಗಳಿಗಾಗಿಯೇ ಪಿಟ್ಬುಲ್ ನಾಯಿಗಳಿಗೆ ಹೋರಾಡಲು ಕಲಿಸಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ನಾಯಿ ಸಾಯುವವರೆಗೂ ಹೋರಾಟ ಮುಂದುವರಿಸುತ್ತಾರೆ. ಒಮ್ಮೊಮ್ಮೆ ವಿದ್ಯುದಾಘಾತ, ಗುಂಡಿನ ದಾಳಿ ಅಥವಾ ಇತರ ವಿಧಾನಗಳಿಂದ ಕ್ರೂರವಾಗಿ ಕೊಲ್ಲಲಾಗುತ್ತದೆ.
ಪಿಟ್ಬುಲ್ ದವಡೆಗಳು ಅತ್ಯಂತ ಶಕ್ತಿಯುತವಾಗಿವೆ. ಪಿಟ್ಬುಲ್ ಎಷ್ಟು ಅಪಾಯಕಾರಿ ಎಂದರೆ ಅದನ್ನು 40ಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧಿಸಲಾಗಿದೆ. ಬ್ರೆಜಿಲ್, ಡೆನ್ಮಾರ್ಕ್, ಫಿನ್ಲ್ಯಾಂಡ್, ಜರ್ಮನಿ, ಬೆಲ್ಜಿಯಂ, ಇಂಗ್ಲೆಂಡ್, ನಾರ್ವೆ, ಫ್ರಾನ್ಸ್, ಪೋಲೆಂಡ್, ಚೀನಾ, ಜಪಾನ್ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಪಿಟ್ಬುಲ್ಗೆ ನಿಷೇಧ ಹೇರಲಾಗಿದೆ.