ಟಿಜೆ ಜ್ಞಾನವೇಲ್ ನಿರ್ದೇಶದನ ಸೂರ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಸಿನಿಮಾ ಜೈ ಭೀಮ್ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಿತ್ತು.
ಈ ಸಿನಿಮಾವು ದೇಶಮಟ್ಟದಲ್ಲಿ ವ್ಯಾಪಕ ಚರ್ಚೆಯನ್ನೂ ಹುಟ್ಟು ಹಾಕಿತ್ತು. ಇದೀಗ ಈ ಸಿನಿಮಾವು 2022ನೇ ಸಾಲಿನ ಆಸ್ಕರ್ ಬೆಸ್ಟ್ ಫೀಚರ್ ಫಿಲಂ ವಿಭಾಗಕ್ಕೆ ಶಾರ್ಟ್ಲಿಸ್ಟ್ ಆಗಿದೆ. ಜೈ ಭೀಮ್ ಜೊತೆಯಲ್ಲಿ ಮೋಹನ್ಲಾಲ್ರ ಮರಕ್ಕರ್ ಕೂಡ ಶಾರ್ಟ್ಲಿಸ್ಟ್ ಆಗಿದೆ. ಅಂತಿಮ ನಾಮಿನೇಷನ್ ಫೆಬ್ರವರಿ 8ರಂದು ಘೋಷಣೆಯಾಗಲಿದೆ.
ಬುಡಕಟ್ಟು ಜನಾಂಗದವರ ಮೇಲೆ ನಡೆಯುವ ದೌರ್ಜನ್ಯದ ನೈಜ ಘಟನೆಗಳನ್ನು ಆಧರಿಸಿ ಜೈ ಭೀಮ್ ಸಿನಿಮಾದ ಕತೆಯನ್ನು ಹೆಣೆಯಲಾಗಿತ್ತು. ಇದು 2021ನೇ ಸಾಲಿನ ತಮಿಳಿನ ಬೆಸ್ಟ್ ಸಿನಿಮಾ ಎಂದು ಕರೆಯಬಹುದಾಗಿದೆ. ಈ ಸಿನಿಮಾದಲ್ಲಿ ನಟ ಸೂರ್ಯ, ಲಿಜೊಮೋಲ್ ಜೋಸ್ ಹಾಗೂ ಮಣಿಕಂದನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
94ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಆಯ್ಕೆಯಾದ ಏಕೈಕ ತಮಿಳು ಸಿನಿಮಾ ಜೈ ಭೀಮ್ ಆಗಿದೆ. ವಿಶ್ವಾದ್ಯಂತ ಆಯ್ಕೆಯಾಗಿರುವ 276 ಚಲನಚಿತ್ರಗಳ ಪೈಕಿ ಜೈ ಭೀಮ್ ಹಾಗೂ ಮಲಯಾಳಂ ಸಿನಿಮಾ ಮರಕ್ಕರ್ : ಅರಬಿಕದಲಿಂತೆ ಸಿಂಹಂ ಭಾರತೀಯ ಸಿನಿಮಾಗಳಾಗಿವೆ.