ಆರ್ಆರ್ಆರ್ ಸಿನಿಮಾ ರಿಲೀಸ್ಗೂ ಮುನ್ನವೇ ಸಾಕಷ್ಟು ವಿಚಾರಗಳ ಮೂಲಕ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈಗಾಗಲೇ ಸಿನಿಮಾದ ಟ್ರೇಲರ್, ಟೀಸರ್ ಹಾಗೂ ಹಾಡುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಮುಂಬೈನಲ್ಲಿ ನಡೆದ ಆರ್ಆರ್ಆರ್ ಪ್ರಿ ರಿಲೀಸ್ ಸಮಾರಂಭದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಜ್ಯೂನರ್ ಎನ್ಟಿಆರ್ ಹಾಗೂ ರಾಮ್ಚರಣ್ರ ಇಂಟ್ರಾಡಕ್ಷನ್ ಸೀನ್ ಪ್ರಸ್ತುತಪಡಿಸಿದರು. ಈ ವೇಳೆಯಲ್ಲಿ ಇಬ್ಬರು ನಟರ ಜೊತೆ ಕೆಲಸ ಮಾಡುವ ತಮ್ಮ ಅನುಭವವನ್ನು ಹಂಚಿಕೊಂಡರು. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಸಲ್ಮಾನ್ ಖಾನ್ ಭಜರಂಗಿ ಭಾಯಿಜಾನ್ ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಕರಣ್ ಜೋಹರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಎಸ್.ಎಸ್. ರಾಜಮೌಳಿ ಆರ್ಆರ್ಆರ್ ಸಿನಿಮಾದಲ್ಲಿ ಜ್ಯೂನಿಯರ್ ಎನ್ಟಿಆರ್ ಹಾಗೂ ರಾಮ್ಚರಣ್ ಪರಿಚಯದ ದೃಶ್ಯದ ಬಗ್ಗೆ ವಿವರಣೆ ನೀಡಿದರು.
ಚರಣ್ ಹಾಗೂ ತಾರಕ್ರನ್ನು ರಾಮ್ ಮತ್ತ ಭೀಮ್ ಎಂದು ಕರೆದ ರಾಜಮೌಳಿ, ಇವರಿಬ್ಬರು ನನ್ನ ಕುಟುಂಬದ ಭಾಗವಾಗಿದ್ದಾರೆ. ನಾವು ಈ ಹಿಂದೆ ಕೂಡ ಸ್ಟಾರ್ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ಸ್ಟಾರ್ಡಮ್ನಿಂದ ನಾನು ಸ್ಟಾರ್ ನಿರ್ದೇಶಕ ಎಂಬ ಹೆಸರನ್ನು ಪಡೆದಿದ್ದೇನೆ. ಚರಣ್ ಒಬ್ಬ ಅದ್ಭುತ ನಟ ಆದರೆ ಅವರಿಗೆ ಈ ವಿಚಾರ ತಿಳಿದಿಲ್ಲ. ತಾರಕ್ ಕೂಡ ಅದ್ಭುತ ನಟ ಆದರೆ ಅವರಿಗೆ ಈ ವಿಚಾರ ತಿಳಿದಿದೆ ಎಂದು ಮಾರ್ಮಿಕವಾಗಿ ಮಾತನಾಡಿದ್ರು.
ಇಂಟ್ರಾಡಕ್ಷನ್ ಸೀನ್ ಬಗ್ಗೆ ಮಾತನಾಡಿದ ರಾಜಮೌಳಿ, ನಾನು ಈ ದೃಶ್ಯಗಳಿಗಾಗಿ ಇಬ್ಬರಿಗೆ ತುಂಬಾನೇ ತೊಂದರೆ ನೀಡಿದ್ದೇನೆ. ತಾರಕ್ ಇಂಟ್ರಾಡಕ್ಷನ್ ಸೀನ್ಗಾಗಿ ನಾನು ಅವರಿಗೆ ಬುಲ್ಗೇರಿಯಾದ ಕಾಡಿನಲ್ಲಿ ಬರಿಗಾಲಿನಲ್ಲಿ ಓಡುವಂತೆ ಮಾಡಿದ್ದೇನೆ. ಅದೇ ರೀತಿ ಚರಣ್ಗೂ ಸಹ ನಾವು ಅವರನ್ನು 2000 ಜನರ ಮಧ್ಯದಲ್ಲಿ ನೂಕಿದ್ದೇವೆ. ಅಲ್ಲಿ ಬೆವರು, ಧೂಳು ಹಾಗೂ ರಕ್ತ ಎಲ್ಲವೂ ಇತ್ತು. ನನ್ನ ಸಿನಿಮಾ ಜೀವನದಲ್ಲೇ ನಾನು ನಿರ್ದೇಶಿಸಿದ ಬೆಸ್ಟ್ ಸೀನ್ ಇದೇ ಎಂದು ಹೇಳಿದರು.