ಕರಿದ ತಿಂಡಿಗಳೆಂದರೆ ಯಾರಿಗಿಷ್ಟವಿಲ್ಲ ಹೇಳಿ. ಅದರಲ್ಲೂ ಈಗಂತೂ ಮಳೆಗಾಲ. ಹೊರಗೆ ಸುರಿವ ಮಳೆ ನೋಡುತ್ತಾ ಬಿಸಿ ಬಿಸಿಯಾದ ಬಜ್ಜಿ, ಬೋಂಡಾ, ಟಿಕ್ಕಿ ಸವಿಯುತ್ತಿದ್ದರೆ ಅದರ ಮಜಾನೇ ಬೇರೆ. ಇಲ್ಲಿ ಆರೋಗ್ಯಕರವಾದ ಹೆಸರುಬೇಳೆ ಹಾಗೂ ಸ್ಪ್ರಿಂಗ್ ಆನಿಯನ್ ಸೇರಿಸಿ ಮಾಡುವ ಟಿಕ್ಕಿ ಇದೆ. ಟ್ರೈ ಮಾಡಿ ಮನೆಯಲ್ಲಿ.
ಬೇಕಾಗುವ ಸಾಮಗ್ರಿಗಳು:
1 ½ ಕಪ್ – ಮೊಳಕೆ ಬರಿಸಿದ ಹೆಸರುಕಾಳು, ½ ಕಪ್ – ಕತ್ತರಿಸಿದ ಸ್ಪ್ರಿಂಗ್ ಆನಿಯನ್, 2 ಟೀ ಸ್ಪೂನ್ – ಕತ್ತರಿಸಿದ ಹಸಿಮೆಣಸು, 1 ಟೀ ಸ್ಪೂನ್ – ಕತ್ತರಿಸಿದ ಬೆಳ್ಳುಳ್ಳಿ, ¼ ಕಪ್ – ಓಟ್ಸ್ ಪುಡಿ, ಉಪ್ಪು – ರುಚಿಗೆ ತಕ್ಕಷ್ಟು, 1 ¼ ಟೀ ಸ್ಪೂನ್ – ಎಣ್ಣೆ.
ಮಾಡುವ ವಿಧಾನ:
ಮೊಳಕೆ ಬರಿಸಿದ ಹೆಸರುಕಾಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಒಂದು ಅಗಲವಾದ ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಓಟ್ಸ್ ಪುಡಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪ ತೆಗೆದುಕೊಂಡು ಕೈಯಿಂದ ಟಿಕ್ಕಿ ರೀತಿ ತಟ್ಟಿಕೊಳ್ಳಿ.
ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದರ ಮೇಲೆ ಈ ಟಿಕ್ಕಿ ಇಟ್ಟು ಎರಡೂ ಕಡೆ ಚೆನ್ನಾಗಿ ಹೊಂಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ. ರುಚಿಕರವಾದ ಹೆಸರುಕಾಳು ಟಿಕ್ಕಿಯನ್ನು ಪುದೀನಾ ಚಟ್ನಿ ಜತೆ ಸವಿಯಿರಿ.