ಕರಿಬೇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿಕೊಂಡು ರುಚಿಕರವಾದ ರೈಸ್ ಬಾತ್ ಕೂಡ ಮಾಡಬಹುದು. ರೈಸ್ ಬಾತ್ ಪ್ರಿಯರಿಗೆ ಇದು ತುಂಬಾ ಇಷ್ಟವಾಗುತ್ತದೆ. ಜತೆಗೆ ಆರೋಗ್ಯಕರ ಕೂಡ ಹೌದು.
ಬೇಕಾಗುವ ಸಾಮಗ್ರಿಗಳು:
ಅನ್ನ – 2 ಕಪ್, ಅರಿಸಿನ – 1/4 ಟಿ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 2 ಟೀ ಸ್ಪೂನ್, ಕರಿಬೇವು – 1 ಕಪ್, ಉದ್ದಿನಬೇಳೆ – 1 ಟೇಬಲ್ ಸ್ಪೂನ್, ಒಣ ಮೆಣಸು – 5, ಹುಣಸೆಹಣ್ಣು – ಒಂದು ಸಣ್ಣ ಪೀಸ್, ತೆಂಗಿನಕಾಯಿ ತುರಿ – 3 ಟೇಬಲ್ ಸ್ಪೂನ್. ಇನ್ನು ಒಗ್ಗರಣೆಗೆ ಎಣ್ಣೆ – 4 ಟೀ ಸ್ಪೂನ್, ಕಡಲೆಬೇಳೆ – 2 ಟೀ ಸ್ಪೂನ್, ಇಂಗು-1/4 ಟಿ ಸ್ಪೂನ್, ಹುರಿದ ಕಡಲೆಬೀಜ – 2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಟೀ ಸ್ಪೂನ್ ಎಣ್ಣೆ ಹಾಕಿ ಉದ್ದಿನಬೇಳೆ, ಒಣಮೆಣಸು, ಹುಣಸೆಹಣ್ಣು ಹಾಕಿ ಹುರಿದುಕೊಳ್ಳಿ. ಬೇಳೆ ಕೆಂಪಾಗುತ್ತಿದ್ದಂತೆ ಇದಕ್ಕೆ ಕರಿಬೇವು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ತೆಂಗಿನಕಾಯಿ ತುರಿ ಸೇರಿಸಿ 3 ನಿಮಿಷಗಳ ಕಾಲ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿ.
ಈ ಮಿಶ್ರಣ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ನೀರು ಸೇರಿಸದೆ ರುಬ್ಬಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 4 ಟೀ ಸ್ಪೂನ್ ಎಣ್ಣೆ ಹಾಕಿ ಕಡಲೆಬೇಳೆ ಸೇರಿಸಿ ಇದು ಕೆಂಪಾಗುತ್ತಿದ್ದಂತೆ ಇಂಗು, ಅರಿಶಿನ, ಹುರಿದ ಕಡಲೆಬೀಜ, ಪುಡಿ ಮಾಡಿಕೊಂಡ ಮಿಶ್ರಣ ಹಾಗೂ ಉಪ್ಪು ಸೇರಿಸಿ 1 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ರುಚಿಕರವಾದ ಕರಿಬೇವಿನ ರೈಸ್ ಬಾತ್ ರೆಡಿ.