ಬಿಸಿ ಬಿಸಿ ಅನ್ನಕ್ಕೆ ಮೂಲಂಗಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ರುಚಿಕರವಾಗಿ ಮೂಲಂಗಿ ಸಾಂಬಾರು ಮಾಡುವ ವಿಧಾನ ಇದೆ. ಒಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಅರ್ಧ ಕಪ್- ತೊಗರಿಬೇಳೆ, 2 ಮೂಲಂಗಿ, 3 ಟೊಮೆಟೊ (ಕತ್ತರಿಸಿದ್ದು), 12-ಬೆಳ್ಳುಳ್ಳಿ ಎಸಳು, 1 ಈರುಳ್ಳಿ-ಉದ್ದಕ್ಕೆ ಕತ್ತರಿಸಿಕೊಳ್ಳಿ, ಸ್ವಲ್ಪ ಕೊತ್ತಂವಬರಿ ಸೊಪ್ಪು, ಸಾಂಬಾರು ಪೌಡರ್-2 ಟೇಬಲ್ ಸ್ಪೂನ್, 1 ಟೀ ಸ್ಪೂನ್- ಅರಿಸಿನ, ಅಚ್ಚ ಕಾರದಪುಡಿ-1/2 ಟೇಬಲ್ ಸ್ಪೂನ್, ನೆಲ್ಲಿಕಾಯಿ ಗಾತ್ರದ ಹುಣಸೆಹಣ್ಣು ನೀರಲ್ಲಿ ನೆನೆಸಿದ್ದು, ಸಾಸಿವೆ, ಜೀರಿಗೆ-1/2 ಟೇಬನ್ ಸ್ಪೂನ್, ಕೊತ್ತಂಬರಿ ಸೊಪ್ಪು-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, 2 ಟೇಬಲ್ ಸ್ಪೂನ್-ಎಣ್ಣೆ.
ಮಾಡುವ ವಿಧಾನ:
ಒಂದು ಕುಕ್ಕರ್ ಗೆ ಬೇಳೆ ಹಾಕಿ ಅದಕ್ಕೆ 2 ಕಪ್ ನೀರು, ಕತ್ತರಿಸಿಟ್ಟುಕೊಂಡ ಟೊಮೆಟೊ, ಕರಿಬೇವು, ಬೆಳ್ಳುಳ್ಳಿ, ಅರಿಸಿನ , 1 ಟೇಬಲ್ ಸ್ಪೂನ್ ಎಣ್ಣೆ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ವಿಷಲ್ ಕೂಗಿಸಿಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಜೀರಿಗೆ ಹಾಕಿ ಚಟಪಟ ಎಂದಾಗ ಕರಿಬೇವು ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಸಿಪ್ಪೆ ತೆಗೆದು ವೃತ್ತಾಕಾರವಾಗಿ ಕತ್ತರಿಸಿಟ್ಟುಕೊಂಡು ಮೂಲಂಗಿ ಹಾಕಿ ಸ್ವಲ್ಪ ಉಪ್ಪು ಹಾಕಿ 4 ನಿಮಿಷಗಳ ಫ್ರೈ ಮಾಡಿ. ಇದಕ್ಕೆ ಸಾಂಬಾರು ಪುಡಿ,1 ಕಪ್ ನೀರು ಹಾಕಿ ಬೇಯಲು ಇಡಿ. ಕುಕ್ಕರ್ ನಲ್ಲಿ ಬೆಂದ ಬೇಳೆಯನ್ನು ಒಂದು ಸೌಟಿನ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದನ್ನು ಬೇಯಿಸಿದ ಮೂಲಂಗಿ ಹಾಕಿ ಬೇಯಲು ಇಡಿ. ಇದಕ್ಕೆ ನೆನೆಸಿಟ್ಟ ಹುಣಸೆಹಣ್ನಿನ ರಸ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ಕೊನೆಗೆ ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಮೂಲಂಗಿ ಸಾರು ಸವಿಯಲು ಸಿದ್ಧ.