ಬೆಂಗಳೂರು: ಅಫ್ಘಾನಿಸ್ತಾನದಿಂದ ಬರುತ್ತಿರುವ ವರದಿಗಳನ್ನು ನೋಡಿದರೆ ದೇಶದಲ್ಲಿ ಭಯ ಮತ್ತು ಅಭದ್ರತೆ ಎಷ್ಟು ಆವರಿಸಿದೆ ಎಂಬುದನ್ನು ತೋರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ಭಾರತಕ್ಕೆ ಹಾಗೂ ಇತರ ಪ್ರದೇಶಗಳಿಗೂ ಕಷ್ಟದ ಸಮಯ. ಈ ಘಟನೆಗಳಿಗೆ ಮಾನವೀಯ ಕಳಕಳಿಯಿಂದ ನಾವು ಪ್ರತಿಕ್ರಿಯಿಸಬೇಕಿದೆ ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.
ಅಪ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬೆನ್ನಲ್ಲೇ ಅಟ್ಟಹಾಸ ಮೇರೆ ಮೀರಿದ್ದು, ಅಪ್ಘಾನ್ ನಾಗರಿಕರು, ವಿದೇಶಿಗರು ಭಯ ಹಾಗೂ ಅಭದ್ರತೆಯಿಂದ ದೇಶ ತೊರೆಯುತ್ತಿದ್ದು, ಕ್ಷಣ ಕ್ಷಣಕ್ಕೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಫ್ಘಾನ್ ನಲ್ಲಿ ಹಲವು ಭಾರತೀಯರು ರಕ್ಷಣೆಗಾಗಿ ಮೊರೆ ಇಡುತ್ತಿದ್ದು, ವಿಮಾನ ನಿಲ್ದಾಣಗಳಿಗೂ ಬರಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನೊಂದೆಡೆ ಹೋಟೇಲ್ ಗಳಲ್ಲಿ ಕಾರ್ಮಿಕರು ಬಂಧಿಯಾಗಿದ್ದು, ತಾಯ್ನಾಡಿಗೆ ಮರಳಲು ಪರದಾಡುತ್ತಿದ್ದಾರೆ. ಅನೇಕ ಅಫ್ಘಾನ್ ವಿದ್ಯಾರ್ಥಿಗಳು, ನಾಗರಿಕರು ಭಾರತದಲ್ಲಿಯೂ ಇದ್ದು ಸ್ವದೇಶದ ಸ್ಥಿತಿ ಭಯಭೀತರನ್ನಾಗಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.