ಅಪ್ಪುಗೆ ನಮ್ಮ ಮನಸ್ಸಿಗೆ ಹಿತ ನೀಡುವಂತಹ ಪ್ರಕ್ರಿಯೆಗಳಲ್ಲೊಂದು. ಆತ್ಮೀಯರನ್ನ ತಬ್ಬಿಕೊಂಡಾಗ ನಮ್ಮಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸುವ ರೀತಿ ಇದು. ಅಚ್ಚರಿಯ ಸಂಗತಿಯೆಂದರೆ ಈ ಆತ್ಮೀಯ ಅಪ್ಪುಗೆ ಅನೇಕ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಬಲ್ಲದು. ಅನಾರೋಗ್ಯವನ್ನು ಸರಿಪಡಿಸಲು ಇದು ಒಂದು ರೀತಿಯ ಮ್ಯಾಜಿಕ್ ಟ್ರಿಕ್ ಇದ್ದಂತೆ. ತಬ್ಬಿಕೊಳ್ಳುವಿಕೆಯಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಅನ್ನೋದು ಸಂಶೋಧನೆಯಲ್ಲೂ ಸಾಬೀತಾಗಿದೆ.
ಒತ್ತಡ ನಿವಾರಣೆ: ಅಪ್ಪುಗೆಯಿಂದ ಒತ್ತಡ ನಿವಾರಣೆಯಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಅಪ್ಪುಗೆಯು ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ಸಹ ಕೊನೆಗೊಳಿಸುತ್ತದೆ. ಅಪ್ಪುಗೆಯು ಮೆದುಳಿಗೆ ಸಂಬಂಧಿಸಿದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಒತ್ತಡವನ್ನು ಸಂತೋಷದ ಭಾವನೆಗಳಾಗಿ ಪರಿವರ್ತಿಸುತ್ತದೆ.
ರೋಗಗಳು ದೂರ ಉಳಿಯುತ್ತವೆ: ಜರ್ನಲ್ ಆಫ್ ಸೈಕಲಾಜಿಕಲ್ ಸೈನ್ಸ್ 400 ಜನರನ್ನು ಅಧ್ಯಯನಕ್ಕೆ ಒಳಪಡಿಸಿದೆ. ದೈನಂದಿನ ಅಪ್ಪುಗೆಗಳು ರೋಗಗಳ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ ಎಂಬುದು ಈ ವೇಳೆ ಸಾಬೀತಾಗಿದೆ. ಅಪ್ಪುಗೆಯಿಂದ ರೋಗಗಳು ದೂರವಿರುತ್ತವೆ.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಅಪ್ಪುಗೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಪಬ್ಮೆಡ್ ಸೆಂಟ್ರಲ್ ಜರ್ನಲ್ ಪ್ರಕಾರ, ದಂಪತಿಗಳನ್ನು ಅಧ್ಯಯನಕ್ಕೊಳಪಡಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಕೆಲವು ಜೋಡಿಗಳಿಗೆ ಪರಸ್ಪರರ ಕೈಗಳನ್ನು 10 ನಿಮಿಷಗಳ ಕಾಲ ಹಿಡಿದುಕೊಳ್ಳುವಂತೆ ಕೇಳಲಾಯಿತು ಮತ್ತು ಕೆಲವರಿಗೆ 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವಂತೆ ಸೂಚಿಸಲಾಗಿತು. ಈ ಮೂಲಕ ಅಪ್ಪುಗೆಯಿಂದ ಹೃದಯ ಬಡಿತ ನಿಯಂತ್ರಣ ಸಾಧ್ಯ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.
ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ: ಈ ಅಧ್ಯಯನದಲ್ಲಿ ಕೇವಲ 20 ಸೆಕೆಂಡುಗಳ ಕಾಲ ಅಪ್ಪಿಕೊಳ್ಳುವುದರಿಂದ ರಕ್ತದೊತ್ತಡ ಸರಿಯಾದ ಮಟ್ಟಕ್ಕೆ ಬರುತ್ತದೆ ಎಂಬುದು ಸಾಬೀತಾಗಿದೆ. ಈ ಕಾರಣದಿಂದಾಗಿ ಹೃದಯದ ಆರೋಗ್ಯವು ಸುಧಾರಿಸುತ್ತದೆ.
ಅಪ್ಪುಗೆಯಿಂದ ಸಂತಸ : ಪರಸ್ಪರ ಅಪ್ಪಿಕೊಳ್ಳುವುದು ಆಕ್ಸಿಟೋಸಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಸಂತೋಷದ ಮಟ್ಟವೂ ಹೆಚ್ಚುತ್ತದೆ. ಪರಿಣಾಮ ನಮ್ಮ ಬದುಕು ಸುಧಾರಿಸುತ್ತದೆ.
ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ: ಯಾರಾದರೂ ಒಬ್ಬರನ್ನೊಬ್ಬರು ತಬ್ಬಿಕೊಂಡರೆ, ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಪ್ಪಿಕೊಳ್ಳುವುದರಿಂದ ಮೆದುಳಿನ ಕಾರ್ಯ ಹೆಚ್ಚುತ್ತದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಅದರ ಪರಿಣಾಮವು ನಮ್ಮ ಮೇಲಾಗುತ್ತದೆ.