ಉಪ್ಪಿಲ್ಲ ಅಂದ್ರೆ ಅಡುಗೆ ರುಚಿಸಲಾರದು. ಹಾಗಂತ ಜಾಸ್ತಿ ಉಪ್ಪಿದ್ದರೂ ತಿನ್ನಲು ಸಾಧ್ಯವಿಲ್ಲ. ಒಮ್ಮೊಮ್ಮೆ ಗ್ರೇವಿ ಮಾಡುವ ಸಮಯದಲ್ಲಿ ಉಪ್ಪು ಹೆಚ್ಚಾಗಿ ಬಿಡುತ್ತದೆ. ಹಾಗೆಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಏನು ಮಾಡಬೇಕೆಂದರೆ……
ಗ್ರೇವಿ ಪದಾರ್ಥಗಳಲ್ಲಿ ಉಪ್ಪು ಹೆಚ್ಚಾದರೆ ಗೋಧಿ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿ ಹಾಕಬೇಕು. ಈ ಹಿಟ್ಟಿನಲ್ಲಿ ಶೀಘ್ರವಾಗಿ ಉಪ್ಪು ಹೀರುವ ಗುಣವಿದೆ. ಉಪ್ಪಿನ ಪ್ರಮಾಣ ಹೆಚ್ಚಾಗಿದ್ದಲ್ಲಿ ಮತ್ತೂ 5 ಉಂಡೆಗಳನ್ನು ಸೇರಿಸಿದರೆ ಆಯ್ತು. ಹತ್ತು ನಿಮಿಷಗಳಾದ ಬಳಿಕ ರುಚಿಗೆ ಏನು ಕೊರತೆ ಇರದು.
ಸಮಯಕ್ಕೆ ಸರಿಯಾಗಿ ಮನೆಯಲ್ಲಿ ಗೋಧಿ ಹಿಟ್ಟು ಇಲ್ಲದೆ ಹೋದಲ್ಲಿ, ಚಿಕ್ಕ ಚಿಕ್ಕ ಆಲೂಗಡ್ಡೆ ಬೇಯಿಸಿ ಅದನ್ನು ಅಡುಗೆಯಲ್ಲಿ ಹಾಕಿದರೆ ಸಾಕು. ಆಲೂಗಡ್ಡೆ ಸಹ ಉಪ್ಪನ್ನು ಹೀರುತ್ತದೆ. ಕಾಲು ಗಂಟೆ ಬಳಿಕ ತೆಗೆದರೆ ಸಾಕು.
ಗ್ರೇವಿ ಅಂಟು ಅಂಟಾಗಿದ್ದಲ್ಲಿ ಅದಕ್ಕೆ ಸ್ವಲ್ಪ ಬಿಸಿ ನೀರು ಹಾಕಿದರೂ ಇಲ್ಲವೇ ಹಾಲು ಬೆರೆಸಿದರೂ ಪ್ರಯೋಜನವಿದೆ. ಹಾಲು ಉಪ್ಪು ಹೀರಿಕೊಳ್ಳದೇ ಇದ್ದರೂ ಪದಾರ್ಥಕ್ಕೆ ತುಂಬಾ ರುಚಿ ಕೊಡುತ್ತದೆ. ಹಾಲು ಬೇಡವೆನಿಸಿದರೆ ಕೆನೆ ಅಥವಾ ಚೀಸ್ ಸಹ ಸೇರಿಸಬಹುದು. ಇದು ಆಹಾರಕ್ಕೆ ರುಚಿ ನೀಡುವುದಲ್ಲದೆ ಉಪ್ಪಿನ ಪ್ರಮಾಣ ನಿಯಂತ್ರಿಸುತ್ತದೆ.
ಒಣಗಿದಂತಹ, ಪಲ್ಯದಂತಹ ಆಹಾರದಲ್ಲಿ ಉಪ್ಪು ಹೆಚ್ಚಾದಲ್ಲಿ ಸ್ವಲ್ಪ ಮೊಸರು ಮಿಶ್ರ ಮಾಡಿ. ಮೊಸರನ್ನು ಹಾಕಿದ ಬಳಿಕ ಸ್ವಲ್ಪ ಸಮಯ ಒಲೆ ಮೇಲೆ ಇಡಬೇಕು. ಆಗ ರುಚಿ ಕೆಡುವುದಿಲ್ಲ. ಆದರೆ ಮೊಸರು ಹೆಚ್ಚು ಸೇರಿಸಿದರೆ ರುಚಿ ದೂರವಾಗುತ್ತದೆ.